ಶಂಕರ ಕಾಲೇಜು ಆಡಳಿತ ಮಂಡಳಿ ಹೈಜಾಕ್ ಆರೋಪ; ನವಲಗುಂದದಲ್ಲಿ ನಾಗರಿಕರ ಆಕ್ರೋಶ, ಉಗ್ರ ಹೋರಾಟದ ಎಚ್ಚರಿಕೆ!

Spread the love

ನವಲಗುಂದ: ಕಳೆದ 60 ವರ್ಷಗಳಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಾ ಬಂದಿರುವ ಸ್ಥಳೀಯ ಶ್ರೀ ಶಂಕರ ಮಹಾವಿದ್ಯಾಲಯ ಇದೀಗ ಆಡಳಿತ ಮಂಡಳಿಯ ವಿವಾದದಿಂದಾಗಿ ಚರ್ಚೆಯ ಕೇಂದ್ರಬಿಂದುವಾಗಿದೆ. ಸಂಸ್ಥಾಪಕರು ರೂಪಿಸಿದ್ದ ಮೂಲ ಆಶಯಗಳಿಗೆ ವಿರುದ್ಧವಾಗಿ ಕಾಲೇಜಿನ ಹಿಂದಿನ ಪ್ರಾಚಾರ್ಯ ಡಾ. ಬಿ.ಸಿ. ಪೂಜಾರ ಅವರು ಆಡಳಿತ ಮಂಡಳಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಮಠಾಧೀಶರನ್ನು ಆಡಳಿತದಿಂದ ಹೊರಗಿಟ್ಟು, ತಮ್ಮ ಕುಟುಂಬದವರು ಹಾಗೂ ಸ್ವಜಾತಿಯವರನ್ನು ಮಂಡಳಿಯಲ್ಲಿ ನೇಮಕ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬೆಳವಣಿಗೆಯನ್ನು ಖಂಡಿಸಿರುವ ಪಟ್ಟಣದ ನಾಗರಿಕರು ಆಡಳಿತ ಮಂಡಳಿಯನ್ನು ಮರುರಚಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಭಾನುವಾರ ಸಂಜೆ ಶ್ರೀ ಶಂಕರ ಮಹಾವಿದ್ಯಾಲಯದಲ್ಲಿ ಪಂಚಗ್ರಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪಟ್ಟಣದ ಪ್ರಮುಖ ನಾಗರಿಕರು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ರಾಯನಗೌಡ ಪಾಟೀಲ, 1970ರಲ್ಲಿ ಮಠಾಧೀಶರು ಹಾಗೂ ಶಿಕ್ಷಣ ಪ್ರೇಮಿಗಳು ಒಗ್ಗೂಡಿ ತಾಲೂಕಿನ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಬೇಕೆಂಬ ಸದುದ್ದೇಶದಿಂದ ನವಲಗುಂದ ತಾಲೂಕು ಶಿಕ್ಷಣ ಸಮಿತಿಯನ್ನು ರಚಿಸಿ ಶಂಕರ ಕಾಲೇಜನ್ನು ಸ್ಥಾಪಿಸಿದ್ದರು. ಬಳಿಕ ಪಂಚಗ್ರಹ ಹಿರೇಮಠದ ಲಿಂ. ಶ್ರೀ ಬಸವಲಿಂಗ ಸ್ವಾಮೀಜಿಗಳು ಶಿಕ್ಷಣ ಸಂಸ್ಥೆಗೆ 40 ಎಕರೆ ಭೂಮಿಯನ್ನು ದಾನವಾಗಿ ನೀಡುವುದರ ಜತೆಗೆ ಮಠದಲ್ಲಿಯೇ ವಸತಿ ನಿಲಯ ಆರಂಭಿಸಿ ಶಿಕ್ಷಣ ಸೇವೆಗೆ ಪ್ರೋತ್ಸಾಹ ನೀಡಿದ್ದರು. ಈ ಕೊಡುಗೆಯನ್ನು ತಾಲೂಕಿನ ಜನತೆ ಇಂದಿಗೂ ಸ್ಮರಿಸುತ್ತಿದ್ದಾರೆ ಎಂದು ಹೇಳಿದರು.

1979ರಲ್ಲಿ ಶಿಕ್ಷಣ ಸಂಸ್ಥೆಯ ಪ್ರಮುಖರು ಒಗ್ಗೂಡಿ ಬಾಂಬೆ ಟ್ರಸ್ಟ್ ಕಾಯ್ದೆಯಡಿ ಟ್ರಸ್ಟ್ ರಚಿಸಿದ್ದು, ಆರಂಭದಲ್ಲಿ ಮಣ್ಣೂರು ಪಟ್ಟದ ದೇವರು ಅಧ್ಯಕ್ಷರಾಗಿದ್ದರು. ನಂತರ ಪಂಚಗ್ರಹ ಹಿರೇಮಠದ ಪೀಠಾಧಿಪತಿಗಳನ್ನೇ ಸಂಸ್ಥೆಯ ಕಾಯಂ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಲು ಬಂದ ಡಾ. ಬಿ.ಸಿ. ಪೂಜಾರ ಅವರು ಮಠದ ಹಿರಿಯ ಪೀಠಾಧ್ಯಕ್ಷರಾದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅನಾರೋಗ್ಯದ ಪರಿಸ್ಥಿತಿಯ ಲಾಭ ಪಡೆದು 2008 ಹಾಗೂ 2018ರಲ್ಲಿ ಹಳೆಯ ಟ್ರಸ್ಟ್ ರದ್ದುಗೊಳಿಸದೆ, ತಮ್ಮ ಇಚ್ಛೆಯಂತೆ ಬೈಲಾ ರೂಪಿಸಿಕೊಂಡು ಮಠಾಧೀಶರನ್ನು ಆಡಳಿತ ಮಂಡಳಿಯಿಂದ ಹೊರಗಿಟ್ಟಿದ್ದಾರೆ. ಅಲ್ಲದೆ, ತಮ್ಮ ಕುಟುಂಬದವರು ಹಾಗೂ ಸ್ವಜಾತಿಯವರನ್ನು ಆಡಳಿತ ಮಂಡಳಿಗೆ ನೇಮಕ ಮಾಡಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ರಾಯನಗೌಡ ಪಾಟೀಲ ಆರೋಪಿಸಿದರು.

ಮಠವು ನೀಡಿರುವ 40 ಎಕರೆ ಭೂಮಿ ಸಾರ್ವಜನಿಕ ಆಸ್ತಿಯಾಗಿದ್ದು, ಅದು ಯಾವುದೇ ಒಂದು ಜಾತಿಗೆ ಸೀಮಿತವಾದುದಲ್ಲ. ಶಿಕ್ಷಣ ಸಂಸ್ಥೆಯು ಎಲ್ಲ ಸಮಾಜದ ಜನರ ಸಹಕಾರ ಮತ್ತು ಸಾರ್ವಜನಿಕರ ಆಶಯದೊಂದಿಗೆ ಮುನ್ನಡೆಯಬೇಕಿದೆ. ಹೀಗಿರುವಾಗ ಮಠಾಧೀಶರನ್ನೇ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಹೊರಗಿಟ್ಟಿರುವುದನ್ನು ಪಟ್ಟಣದ ನಾಗರಿಕರು ಜಾತ್ಯತೀತವಾಗಿ ಖಂಡಿಸುತ್ತಿದ್ದಾರೆ. ಡಾ. ಬಿ.ಸಿ. ಪೂಜಾರ ಅವರು ಕೂಡಲೇ ಎಚ್ಚೆತ್ತುಕೊಂಡು ಹಿರೇಮಠದ ಸ್ವಾಮೀಜಿಗಳನ್ನೇ ಸಂಸ್ಥೆಯ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು. ಆಡಳಿತ ಮಂಡಳಿಯನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ ಸಾರ್ವಜನಿಕರ ಅಭಿಪ್ರಾಯ ಪಡೆದು ನೂತನ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿದರು.

ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಟ್ಟಣದ ನಾಗರಿಕರೆಲ್ಲರೂ ಒಗ್ಗೂಡಿ ಉಗ್ರ ಹೋರಾಟ ನಡೆಸಲಾಗುವುದು. ಅಗತ್ಯ ಬಿದ್ದರೆ ಶ್ರೀಗಳ ನೇತೃತ್ವದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಶರಣಪ್ಪ ಗುಜಮಾಗಡಿ, ಬಸವರಾಜ ನರಗುಂದ, ಬಾಬು ಹಳ್ಳದ, ಬಾಬಾಜಾನ ಮುಲ್ಲಾ, ಅಡಿವೆಪ್ಪ ಶಿರಸಂಗಿ, ಮಹಾಂತೇಶ ಕಲಾಲ, ಪಾಂಡಪ್ಪ ಕೋನರಡ್ಡಿ, ಎಂ.ಡಿ. ಕುಲಕರ್ಣಿ, ಸೈಪುದ್ದೀನ ಅವರಾದಿ, ಶಶಿಧರ ಭರತಭೋಜನಮಠ, ವಿಕ್ರಂ ಕುರಿ, ಮೈಲಾರಪ್ಪ ವೈದ್ಯ, ಅಬ್ಬಾಸಲಿ ದೇವರಿಡು, ಈರಣ್ಣ ಚವಡಿ, ಈರಣ್ಣ ಶಿಡಗಂಟಿ, ಶಿರಾಜ ಧಾರವಾಡ, ಶರಣಪ್ಪ ಹಕ್ಕರಕಿ, ಬಶೀರಅಹ್ಮದ ಹುನಗುಂದ, ಮಾಬುಸಾಬ ಯರಗುಪ್ಪಿ, ಮಹೇಶ ಹಳ್ಳದ, ಈರಪ್ಪ ಪುಗಶೆಟ್ಟಿ ಸೇರಿದಂತೆ ನೂರಾರು ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *