
ಧಾರವಾಡ: ಗಜಾನನ ಮಹಾಲೆ ಅವರ ಪುಣ್ಯತಿಥಿಯ ಅಂಗವಾಗಿ ಧಾರವಾಡದ ಗಜಾನನ ಮಹಾಲೆ ಕಲಾಪ್ರತಿಷ್ಠಾನದ ವತಿಯಿಂದ ಜಿಲ್ಲಾ ಮಟ್ಟದ ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನವೆಂಬರ್ 20, 2026ರಂದು ಬೆಳಿಗ್ಗೆ 9 ಗಂಟೆಗೆ ಧಾರವಾಡದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಸ್ಪರ್ಧೆ ನಡೆಯಲಿದೆ. ಶ್ರೇಷ್ಠ ಚಿತ್ರಕಲಾವಿದರಾದ ಬಿ. ಮಾರುತಿ, ಬಿ.ಎಚ್. ಕುರಿಯವರ ಹಾಗೂ ಎಸ್.ಕೆ. ಪತ್ತಾರ್ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆ ಜರುಗಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ವಯೋಮಿತಿ ಹಾಗೂ ಲಿಂಗಭೇದ ಇರುವುದಿಲ್ಲ. ಸ್ಪರ್ಧಾಳುಗಳು ತಮಗೆ ಅಗತ್ಯವಿರುವ ಸಾಧನ-ಸಲಕರಣೆಗಳನ್ನು ತಾವೇ ತರಬೇಕು. ಯಾವುದೇ ಟ್ರೇಸಿಂಗ್ ಪೇಪರ್ಗಳನ್ನು ಬಳಸಲು ಅವಕಾಶವಿರುವುದಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ರಾಷ್ಟ್ರೀಯ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಬೇಕಾಗಿದ್ದು, ಉಳಿದ ನಿಯಮಗಳನ್ನು ಸ್ಪರ್ಧೆಯ ಸಮಯದಲ್ಲಿ ಪ್ರಕಟಿಸಲಾಗುವುದು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹5,000, ದ್ವಿತೀಯ ಬಹುಮಾನವಾಗಿ ₹3,000 ಹಾಗೂ ತೃತೀಯ ಬಹುಮಾನವಾಗಿ ₹2,000 ನಗದು ನೀಡಲಾಗುತ್ತದೆ. ಅಲ್ಲದೆ, ಸಮಾಧಾನಕರ ಬಹುಮಾನವಾಗಿ ₹1,000 ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ನವೆಂಬರ್ 15, 2026ರೊಳಗೆ ತಮ್ಮ ಪೂರ್ಣ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರವೇಶ ಶುಲ್ಕ ₹100 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್.ಕೆ. ಪತ್ತಾರ್ (ಮೊ. 948837351), ಬಿ. ಕೊಳಗೇರಿ (ಮೊ. 7019821640) ಹಾಗೂ ಸಂತೋಷ್ ಗಜಾನನ ಮಹಾಲೆ (ಮೊ. 9483738598) ಅವರನ್ನು ಸಂಪರ್ಕಿಸಬಹುದು ಎಂದು ಗಜಾನನ ಮಹಾಲೆ ಕಲಾಪ್ರತಿಷ್ಠಾನದ ಕಾರ್ಯದರ್ಶಿ ಕೆ.ಎಚ್. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

