
ಧಾರವಾಡ: ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ತಾಯಿಯೊಬ್ಬರು ತನ್ನ ಮೂವರು ಮಕ್ಕಳಿಗೆ ವಿಷ ನೀಡಿದ ಬಳಿಕ ತಾನೂ ವಿಷ ಸೇವಿಸಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ತಾಯಿ ಸವಿತಾ ಕುರಗುಂದ (38) ಹಾಗೂ ಅವರ ಎಂಟು ವರ್ಷದ ಮಗಳು ಗದಿಗೆವ್ವ ಮೃತಪಟ್ಟಿದ್ದು, ಉಳಿದ ಇಬ್ಬರು ಮಕ್ಕಳು ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಸವಿತಾ ಕುರಗುಂದ ಅವರು ತಮ್ಮ ಮಕ್ಕಳಾದ ಗದಿಗೆವ್ವ (8), ಭಾಗ್ಯಶ್ರೀ (6) ಹಾಗೂ ಹರ್ಷ (2) ಅವರಿಗೆ ವಿಷ ನೀಡಿದ ಬಳಿಕ ತಾವೂ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ನಾಲ್ವರೂ ಅಸ್ವಸ್ಥಗೊಂಡಿದ್ದರಿಂದ ಸ್ಥಳೀಯರು ತಕ್ಷಣ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಎಂಟು ವರ್ಷದ ಬಾಲಕಿ ಗದಿಗೆವ್ವ ಮಧ್ಯಾಹ್ನ ಮೃತಪಟ್ಟಿದ್ದಳು. ಬಳಿಕ ತಾಯಿ ಸವಿತಾ ಕುರಗುಂದ ಅವರೂ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಇನ್ನುಳಿದ ಇಬ್ಬರು ಮಕ್ಕಳಾದ ಭಾಗ್ಯಶ್ರೀ ಮತ್ತು ಹರ್ಷ ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಕ್ಕಳನ್ನು ಉಳಿಸಿಕೊಳ್ಳಲು ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ತಾಯಿ ತನ್ನ ಮೂವರು ಮಕ್ಕಳಿಗೆ ವಿಷ ನೀಡಿ, ಬಳಿಕ ತಾನೂ ವಿಷ ಸೇವಿಸಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖೆಯ ಬಳಿಕವಷ್ಟೇ ಘಟನೆಯ ಹಿಂದಿನ ನಿಖರ ಕಾರಣ ತಿಳಿದುಬರಬೇಕಿದೆ.

