ಕಬ್ಬು ಬೆಳೆಗಾರರ ಹೋರಾಟಕ್ಕೆ ಮೊದಲ ಜಯ: ಸಮಸ್ಯೆಗಳ ಅಧ್ಯಯನಕ್ಕೆ ಕೇಂದ್ರದಿಂದ ಜಂಟಿ ಸಮಿತಿ ರಚನೆ

Spread the love

ನವದೆಹಲಿ:ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ರೈತರು ನಡೆಸಿದ ಹೋರಾಟಕ್ಕೆ ಸದ್ಯಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಸಕ್ಕರೆ ವಲಯದಲ್ಲಿನ ಸಮಸ್ಯೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಸೂಕ್ತ ಪರಿಹಾರೋಪಾಯಗಳನ್ನು ಶಿಫಾರಸು ಮಾಡಲು ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಜಂಟಿ ಸಮಿತಿ ರಚಿಸಿದೆ. ಈ ಬೆಳವಣಿಗೆಯಿಂದ ಕಬ್ಬು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿದ್ದು, ರೈತರ ಹೋರಾಟಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಂತಾಗಿದೆ.

ಕಳೆದ ಮೂರು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯಂತೆ ಕೇವಲ ಎರಡು ದಿನಗಳಲ್ಲೇ ಜಂಟಿ ಸಮಿತಿ ರಚಿಸಿರುವುದು ಗಮನಾರ್ಹವಾಗಿದೆ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳು, ಸಕ್ಕರೆ ಉದ್ಯಮ ಎದುರಿಸುತ್ತಿರುವ ಸವಾಲುಗಳು ಹಾಗೂ ರೈತರ ವಿವಿಧ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ರೈತರ ಅಹವಾಲುಗಳನ್ನು ಸಹಾನುಭೂತಿಯಿಂದ ಆಲಿಸಿದ್ದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದೀಗ ಆ ಭರವಸೆಯಂತೆ ಸಮಿತಿ ರಚಿಸುವ ಮೂಲಕ ಕೇಂದ್ರ ಸರ್ಕಾರ ರೈತರ ಮನವಿಗೆ ತ್ವರಿತವಾಗಿ ಸ್ಪಂದಿಸಿದೆ.

ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ರೈತರ ಹಿತಾಸಕ್ತಿಗೆ ಪೂರಕವಾದ ಪರಿಹಾರಗಳನ್ನು ರೂಪಿಸುವ ಉದ್ದೇಶದಿಂದ ಈ ಜಂಟಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ರೈತ ಪ್ರಮುಖರು, ಕೃಷಿ ವಿಜ್ಞಾನಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಒಳಗೊಳ್ಳುವ ಮೂಲಕ ಸಮಸ್ಯೆಗಳ ವಿವಿಧ ಆಯಾಮಗಳನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರೊ. ರಮೇಶ್ ಚಂದ್ ಅಧ್ಯಕ್ಷತೆಯ ಈ ಸಮಿತಿಗೆ ಕೇಂದ್ರ ಕೃಷಿ ಆಯುಕ್ತರು, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ (ಸಕ್ಕರೆ) ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಸಮಿತಿಯು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ರೈತರ ಆತಂಕ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.

ಹೋರಾಟಕ್ಕೆ ಸಿಕ್ಕಿದ್ದು ಸದ್ಯಕ್ಕೆ ಭರವಸೆ ಮಾತ್ರ!

ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ, ಸಮಿತಿ ರಚನೆಯಾಗಿರುವುದರಿಂದಲೇ ರೈತರ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿದಿವೆ ಎಂದು ಹೇಳಲಾಗದು. ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ, ಸೂಕ್ತ ಶಿಫಾರಸುಗಳನ್ನು ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಮುಖ್ಯವಾಗಿದೆ. ರೈತರ ಬೇಡಿಕೆಗಳಿಗೆ ಅನುಗುಣವಾಗಿ ಪರಿಣಾಮಕಾರಿ ಕ್ರಮಗಳು ಜಾರಿಯಾದಾಗ ಮಾತ್ರ ಈ ಹೋರಾಟಕ್ಕೆ ಸಂಪೂರ್ಣ ಜಯ ಸಿಕ್ಕಂತಾಗುತ್ತದೆ. ಸದ್ಯಕ್ಕೆ ಜಂಟಿ ಸಮಿತಿ ರಚನೆಯಾಗಿರುವುದು ರೈತರಲ್ಲಿ ಸಂತಸ ಮತ್ತು ಭರವಸೆ ಮೂಡಿಸಿದ್ದರೂ, ಅವರ ನಿರೀಕ್ಷೆಗಳು ನೈಜ ಪರಿಹಾರವಾಗಿ ಸಾಕಾರಗೊಳ್ಳಬೇಕಿದೆ.

Leave a Reply

Your email address will not be published. Required fields are marked *