ಗ್ರಾಮೀಣ ಜನರ ಆರೋಗ್ಯ ಸಂರಕ್ಷಣೆಗೆ ನೆರವು,ಗೊರಸಾಣೆ ಸೇರಿ ಮೂರು ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

 

ಹನೂರು: ಗ್ರಾಮೀಣ ಜನರ ಆರೋಗ್ಯ ಸಂರಕ್ಷಣೆ ಹಾಗೂ ಶಾಲಾ ಮಕ್ಕಳಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ್ ಹೆಲ್ತ್ ಕೇರ್ ಪ್ರಮೋಷನ್ ಟ್ರಸ್ಟ್ (BHPT) ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗೊರಸಾಣೆ, ತುಳಸಿಕೆರೆ ಹಾಗೂ ಅಣೆಹೊಳೆ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.

 

ಗೊರಸಾಣೆ ಗ್ರಾಮದ ಶಾಲಾ ಆವರಣದಲ್ಲಿ ನಡೆದ ಶಿಬಿರದಲ್ಲಿ ತಜ್ಞ ವೈದ್ಯರು ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ರಕ್ತದ ಮಾದರಿ ಪರೀಕ್ಷೆ, ರಕ್ತದೊತ್ತಡ ತಪಾಸಣೆ ಹಾಗೂ ಕಣ್ಣು, ಕಿವಿ ಮತ್ತು ಮೂಗಿನ (ಇಎನ್‌ಟಿ) ಪರೀಕ್ಷೆಗಳನ್ನು ನಡೆಸಿ, ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿದರು. ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ವೈದ್ಯರು ಜನರಲ್ಲಿ ಜಾಗೃತಿ ಮೂಡಿಸಿದರು.

 

ಶಾಲಾ ವಿದ್ಯಾರ್ಥಿಗಳಿಗೆ ಹದಿಹರೆಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವ ಮಹತ್ವ, ಆರೋಗ್ಯಕರ ಜೀವನಶೈಲಿ ಹಾಗೂ ದೈನಂದಿನ ಸ್ವಚ್ಛತಾ ಅಭ್ಯಾಸಗಳ ಕುರಿತು ವಿಶೇಷ ಅರಿವು ಕಾರ್ಯಕ್ರಮ ನಡೆಸಲಾಯಿತು. ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಯಿತು.

 

ಆರೋಗ್ಯ ಸೇವೆಯೊಂದಿಗೆ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಒದಗಿಸುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಮುಂದಾಗಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು.

 

ಕಾರ್ಯಕ್ರಮದಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ. ಸುಹಾಸ್, ಆರೋಗ್ಯ ಅಧಿಕಾರಿ ಡಾ. ದೇವಿ ಆನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಡಾ. ರೇಣುಕಾ, ಅರವಳಿಕೆ ತಜ್ಞ ಡಾ. ಮಹೇಶ್, ಭಾರತ್ ಹೆಲ್ತ್ ಕೇರ್ ಪ್ರಮೋಷನ್ ಟ್ರಸ್ಟ್ ಸಂಸ್ಥಾಪಕ ಅರವಿಂದ್ ಕುಮಾರ್ ಆರ್., ಶ್ರೀ ಮುತ್ತುರಾಜ್, ಶ್ರೀಮತಿ ಅನ್ನಕಿಳಿ, ಮುನಿಸ್ವಾಮಿ, ಅನುಶ್ರೀ, ಗೊರಸಾಣೆ ಶಾಲೆಯ ಶಿಕ್ಷಕರಾದ ಮಹೇಶ್ ಪಿ. ಮತ್ತು ರಂಗಸ್ವಾಮಿ ಎನ್. ಉಪಸ್ಥಿತರಿದ್ದರು.

 

  1. ಇದಲ್ಲದೆ, ಭಾರತ್ ಹೆಲ್ತ್ ಕೇರ್ ಪ್ರಮೋಷನ್ ಟ್ರಸ್ಟ್ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರು, ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಪೋಷಕ ನಾಗರಾಜ್, ಗ್ರಾಮದ ಮುಖಂಡರು, ಶಿಕ್ಷಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ ಕಾರ್ತಿಕ್ ಗೌಡ ಹನೂರು.

Leave a Reply

Your email address will not be published. Required fields are marked *