ಅಜ್ಜೀಪುರದಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ವಾಮಿತ್ವ ಆಸ್ತಿ ಕಾರ್ಡ್ ವಿತರಣೆ: ಶಾಸಕ ಎಂ.ಆರ್. ಮಂಜುನಾಥ್

Spread the love

ಹನೂರು : ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಆಸ್ತಿಯ ಅಧಿಕೃತ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸ್ವಾಮಿತ್ವ ಯೋಜನೆಯಡಿ, ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹನೂರು ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಸ್ತಿ ಕಾರ್ಡ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಶಾಸಕ ಎಂ.ಆರ್. ಮಂಜುನಾಥ್ ಅವರು ಫಲಾನುಭವಿಗಳಿಗೆ ಆಸ್ತಿ ಕಾರ್ಡ್‌ಗಳನ್ನು ವಿತರಿಸಿದರು.

 

ನಂತರ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, “ನಿಮ್ಮ ಮನೆ, ನಿಮ್ಮ ಸೊತ್ತು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದೇ ಸ್ವಾಮಿತ್ವ ಯೋಜನೆಯ ಮುಖ್ಯ ಉದ್ದೇಶ” ಎಂದರು. ಈ ಹಿಂದೆ ಆಸ್ತಿ ಖಾತೆ ಹಾಗೂ ದಾಖಲೆಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿಯಿತ್ತು. ಆದರೆ ಈಗ ಅಧಿಕಾರಿಗಳೇ ಗ್ರಾಮಗಳಿಗೆ ಭೇಟಿ ನೀಡಿ, ಡ್ರೋನ್ ತಂತ್ರಜ್ಞಾನದ ಮೂಲಕ ಆಸ್ತಿಗಳ ಸರ್ವೆ ನಡೆಸಿ ನಿಖರ ದಾಖಲೆಗಳನ್ನು ಸಿದ್ಧಪಡಿಸಿ ಆಸ್ತಿ ಕಾರ್ಡ್ ವಿತರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ರಾಜ್ಯದ ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಸರ್ವೆ ಇಲಾಖೆಗಳ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

 

ಗ್ರಾಮಠಾಣ ವ್ಯಾಪ್ತಿಯಲ್ಲಿ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಪ್ರತಿಯೊಬ್ಬ ಅರ್ಹರಿಗೂ ಯೋಜನೆಯ ಸೌಲಭ್ಯ ದೊರೆಯಬೇಕು. ಮೊದಲ ಹಂತದಲ್ಲಿ ಗ್ರಾಮಠಾಣ ವ್ಯಾಪ್ತಿಯ ಸಂಪೂರ್ಣ ಸರ್ವೆ ನಡೆಸಲಾಗುತ್ತದೆ. ನಂತರ ಗ್ರಾಮಠಾಣದ ಸುತ್ತಮುತ್ತ ಹೆಚ್ಚುವರಿಯಾಗಿ ನಿರ್ಮಿಸಿರುವ ಮನೆಗಳನ್ನೂ ಸರ್ವೆಗೊಳಪಡಿಸಿ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು. ಯೋಜನೆಯಿಂದ ಯಾರೊಬ್ಬರೂ ಹೊರಗುಳಿಯಬಾರದು ಎಂಬುದು ನಮ್ಮ ಆಶಯವಾಗಿದೆ ಎಂದು ಸ್ಪಷ್ಟಪಡಿಸಿದರು.

 

ಹಿಂದೆ ಸರ್ವೆ ಕಾರ್ಯದ ಗುತ್ತಿಗೆ ಪಡೆದಿದ್ದ ಕಂಪನಿಯು ಬೆಟ್ಟ-ಗುಡ್ಡಗಳ ಪ್ರದೇಶದ ನೆಪವೊಡ್ಡಿ ಕಾಮಗಾರಿಯನ್ನು ಅಪೂರ್ಣಗೊಳಿಸಿತ್ತು. ಈ ಕುರಿತು ಸುಮಾರು 20 ಬಾರಿ ಸಂಬಂಧಪಟ್ಟ ಆಯುಕ್ತರು ಹಾಗೂ ಕಂದಾಯ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಒತ್ತಾಯಿಸಿದ ಪರಿಣಾಮ, ಹಿಂದಿನ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ ₹3.75 ಕೋಟಿ ದಂಡ ವಸೂಲಿ ಮಾಡಲಾಗಿದೆ. ಬಳಿಕ ಹೊಸ ಕಂಪನಿಗೆ ಸರ್ವೆ ಕಾರ್ಯದ ಜವಾಬ್ದಾರಿ ವಹಿಸಲಾಗಿದ್ದು, ಡ್ರೋನ್ ತಂತ್ರಜ್ಞಾನದ ಮೂಲಕ ಆಸ್ತಿಗಳ ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಈ ಯೋಜನೆ ಅಜ್ಜೀಪುರ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಇಡೀ ಹನೂರು ತಾಲೂಕಿಗೆ ವಿಸ್ತರಣೆಯಾಗಲಿದೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.

 

ಯೋಜನೆಯಡಿ ಮೊದಲಿಗೆ ಆಸ್ತಿಗಳ ವಿವರಗಳನ್ನು ಕ್ರೋಢೀಕರಿಸಿ ಕರಡು ನಕ್ಷೆ ಸಿದ್ಧಪಡಿಸಿ ನೀಡಲಾಗುತ್ತದೆ. ಆಸ್ತಿಯ ಅಳತೆ ಅಥವಾ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸಾರ್ವಜನಿಕರು ಲಿಖಿತವಾಗಿ ಅಥವಾ ಮೌಖಿಕವಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಲೋಪದೋಷಗಳನ್ನು ಸರಿಪಡಿಸಿದ ಬಳಿಕ ಡಿಜಿಟಲ್ ಆಸ್ತಿ ಕಾರ್ಡ್ ವಿತರಿಸಲಾಗುತ್ತದೆ. ಈ ಕಾರ್ಡ್ ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರುವುದರ ಜೊತೆಗೆ, ಅಗತ್ಯ ಸಂದರ್ಭಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಆಸ್ತಿಯನ್ನು ಅಡಮಾನವಿಡುವ ಪ್ರಕ್ರಿಯೆಯಲ್ಲಿಯೂ ಉಪಯುಕ್ತವಾಗಲಿದೆ ಎಂದು ಹೇಳಿದರು.

 

ಮುಂದಿನ ದಿನಗಳಲ್ಲಿ ಜಮೀನಿನ ಆರ್‌ಟಿಸಿ ದಾಖಲೆಗಳಲ್ಲಿಯೂ ನಾಲ್ಕು ದಿಕ್ಕುಗಳ ನಿರ್ದೇಶಾಂಕಗಳೊಂದಿಗೆ ನಕ್ಷೆ ಒದಗಿಸುವ ಹಾಗೂ ಆಧಾರ್ ಜೋಡಣೆ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದರು. ಆಸ್ತಿಯ ಗಡಿ ವಿಚಾರವಾಗಿ ಕುಟುಂಬಗಳಲ್ಲಿ ಕಲಹಗಳು ಉಂಟಾಗದಂತೆ ಸಹೋದರರು ಪರಸ್ಪರ ಹೊಂದಾಣಿಕೆ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

 

ಕಾರ್ಯಕ್ರಮದಲ್ಲಿ ಎಡಿಎಲ್‌ಆರ್ ನಟರಾಜು, ಸೂಪರ್‌ವೈಸರ್‌ಗಳಾದ ಕುಮಾರಸ್ವಾಮಿ ಮತ್ತು ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವ್, ರಾಚಪ್ಪ, ಶಿವಮೂರ್ತಿ, ಲೋಕೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ :ಕಾರ್ತಿಕ್ ಗೌಡ ಹನೂರು.

Leave a Reply

Your email address will not be published. Required fields are marked *