ಪ್ರಜಾಸೇವಾ ಆಂದೋಲನ: ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶ್ರೀರೂಪ ಕಟ್ಟುನಿಟ್ಟಿನ ಸೂಚನೆ

Spread the love

ಚಾಮರಾಜನಗರ : ಜಿಲ್ಲೆಯಾದ್ಯಂತ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅಹವಾಲು ಅರ್ಜಿಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಜಾಸೇವಾ ಆಂದೋಲನದ ಅಹವಾಲು ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ನಡೆಸಲಾಗುತ್ತಿದೆ. ಈ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳನ್ನು ಈಗಾಗಲೇ ಪ್ರಜಾಸೇವಾ ಆಂದೋಲನ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ. ಆದರೆ, ವಿವಿಧ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿದ ಹಲವು ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. ಇವುಗಳನ್ನು ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

 

ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳು ತಮ್ಮ ಹಂತದಲ್ಲಿಯೇ ಪರಿಶೀಲಿಸಿ, ಸಾಧ್ಯವಾದಷ್ಟು ಅರ್ಜಿಗಳನ್ನು ಅಲ್ಲಿಯೇ ಇತ್ಯರ್ಥಪಡಿಸಬೇಕು. ಅರ್ಜಿಗಳನ್ನು ಮುಂದಿನ ಹಂತಕ್ಕೆ ಕಳುಹಿಸುವ ಅಗತ್ಯವಿದ್ದಲ್ಲಿ ಸೂಕ್ತ ಕಾರಣಗಳನ್ನು ದಾಖಲಿಸಬೇಕು. ಸಕಾರಣವಿಲ್ಲದೆ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳಬಾರದು. ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಹಿಂಬರಹದೊಂದಿಗೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅರ್ಜಿಗಳ ಇತ್ಯರ್ಥದಲ್ಲಿ ವಿಳಂಬವಾದರೆ ಸಾರ್ವಜನಿಕರಲ್ಲಿ ಪ್ರಜಾಸೇವಾ ಆಂದೋಲನದ ಬಗ್ಗೆ ನಿರಾಸಕ್ತಿ ಮೂಡುವ ಸಾಧ್ಯತೆಯಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

 

ಒಂದು ಅಥವಾ ಎರಡು ಅರ್ಜಿಗಳು ಮಾತ್ರ ಬಾಕಿ ಉಳಿಸಿಕೊಂಡಿರುವ ಇಲಾಖೆಗಳು ಅದೇ ದಿನ ಸಂಜೆಯೊಳಗೆ ಅವುಗಳನ್ನು ವಿಲೇವಾರಿ ಮಾಡಬೇಕು. ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಾಕಿ ಇರುವ ಇಲಾಖೆಗಳು ಮುಂದಿನ ಎರಡು ಮೂರು ದಿನಗಳಲ್ಲಿ ಕಡ್ಡಾಯವಾಗಿ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅರ್ಜಿಗಳನ್ನು ಇತ್ಯರ್ಥಪಡಿಸಿದ ಬಳಿಕ ಸಂಬಂಧಪಟ್ಟ ಅರ್ಜಿದಾರರ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಅರ್ಜಿ ವಿಲೇವಾರಿಯಾಗಿರುವ ಬಗ್ಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ನೀಡುವ ಹಿಂಬರಹವೂ ಸ್ಪಷ್ಟವಾಗಿರಬೇಕು ಹಾಗೂ ಕ್ರಮಬದ್ಧವಾಗಿರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

 

ಪ್ರಜಾಸೇವಾ ಆಂದೋಲನದ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರು ಗಮನಿಸುತ್ತಿದ್ದಾರೆ. ಹೀಗಾಗಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ತ್ವರಿತವಾಗಿ ಪರಿಹರಿಸಲು ಜಿಲ್ಲಾಮಟ್ಟದ ಅಧಿಕಾರಿಗಳು ಆದ್ಯತೆ ನೀಡಬೇಕು. ತಾಲೂಕು ತಹಶೀಲ್ದಾರರು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿ ಕುರಿತು ನಿರಂತರ ನಿಗಾ ವಹಿಸಬೇಕು. ಅರ್ಜಿಗಳ ತ್ವರಿತ ವಿಲೇವಾರಿಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿರುವಂತೆ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

 

ಸಭೆಯಲ್ಲಿ ಡಿವೈಎಸ್‌ಪಿ ಸ್ನೇಹರಾಜ್, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ರಮಣ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೆಂಕಟೇಶ್, ಚಾಮರಾಜನಗರ ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ನಟರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‌ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪಾಟೀಲ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು, ಆಹಾರ ಇಲಾಖೆ ಉಪನಿರ್ದೇಶಕಿ ವಸುಂಧರಾ ಹೆಗಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ :ಕಾರ್ತಿಕ್ ಗೌಡ ಹನೂರು.

Leave a Reply

Your email address will not be published. Required fields are marked *