ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲಿಂಗರಾಜ್, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಬಿ. ರಾಜೇಶ್ವರಿ ಅವರು ನೀಡಿರುವ ಕೊಡುಗೆ ಶ್ಲಾಘನೀಯವಾಗಿದೆ. ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ಮೌಲ್ಯಗಳನ್ನು ಬೆಳೆಸುವಲ್ಲಿ ಅವರ ಸೇವೆ ಮಹತ್ವದ್ದಾಗಿದೆ. ಅವರ ಶಿಕ್ಷಣ ಸೇವೆ ಇನ್ನಷ್ಟು ಗೌರವ ಹಾಗೂ ಯಶಸ್ಸಿನೊಂದಿಗೆ ಮುಂದುವರಿಯಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ರಾಜೇಶ್ವರಿ, ಕಳೆದ 23 ವರ್ಷಗಳಿಂದ ಹನಿಕೇತನ ವಿದ್ಯಾ ಸಂಸ್ಥೆಯ ಕುವೆಂಪು ವಿದ್ಯಾಲಯದಲ್ಲಿ ಎಲ್‌ಕೆಜಿ ಯಿಂದ 7ನೇ ತರಗತಿವರೆಗೆ ವಿವಿಧ ಸಮುದಾಯಗಳ ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದ್ದೇನೆ. ನನ್ನ ಪರಿಶ್ರಮಕ್ಕೆ ಇಂದು ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿರುವುದು ಏಳು ಜನ್ಮಗಳ ಪುಣ್ಯವೆನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಪ್ರಶಸ್ತಿಗೆ ಮಣಗಳ್ಳಿ ಗ್ರಾಮಸ್ಥರ ಪ್ರೋತ್ಸಾಹ, ತಂದೆ-ತಾಯಿಯ ಆಶೀರ್ವಾದ, ಶಾಲೆಯ ಅಧ್ಯಕ್ಷ ಉಲ್ಲಾಸ್ ಹಾಗೂ ಕಾರ್ಯದರ್ಶಿ ಶಿವರಾಮೇಗೌಡ ಅವರ ಸಲಹೆ, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ಪೋಷಕರ ಸಹಕಾರ ಕಾರಣವಾಗಿದೆ. ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ಸಬ್‌ಇನ್ಸ್‌ಪೆಕ್ಟರ್, ಆರ್‌ಟಿಒ ಅಧಿಕಾರಿ, ಪೊಲೀಸ್ ಸಿಬ್ಬಂದಿ, ಬಿ.ಎಸ್ಸಿ ನರ್ಸಿಂಗ್ ಹಾಗೂ ಉಪನ್ಯಾಸಕರಾಗಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶಾಲೆ ಹಾಗೂ ತಮ್ಮ ವೃತ್ತಿಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ರಾಜೇಂದ್ರನ್, ಬಾಲಸುಬ್ರಹ್ಮಣ್ಯಂ, ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

