
ಹನೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಡುಗೆ ಅನಿಲದ ಕೊರತೆ: ಸಿಲಿಂಡರ್‌ಗಾಗಿ ದಿನವಿಡೀ ಕಾಯುವ ಸ್ಥಿತಿ
ವರದಿ: ಕಾರ್ತಿಕ್ ಗೌಡ, ಹನೂರು
ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ತಪ್ಪಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿ ಜನರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಕುಟುಂಬದ ಅಡುಗೆಗೆ ಅಗತ್ಯವಾದ ಸಿಲಿಂಡರ್‌ಗಳು ಸಮಯಕ್ಕೆ ಸರಿಯಾಗಿ ದೊರೆಯದೆ ಪರದಾಡುವಂತಾಗಿದೆ.
ಅಡುಗೆ ಅನಿಲ ಸಿಲಿಂಡರ್‌ಗಾಗಿ ಗ್ರಾಮಸ್ಥರು ದಿನವಿಡೀ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮೀಣ ಜನರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ನಗರ ಪ್ರದೇಶಗಳಲ್ಲಿ ಸುಲಭವಾಗಿ ಅಡುಗೆ ಅನಿಲ ದೊರೆಯುತ್ತಿರುವಾಗ, ಗ್ರಾಮೀಣ ಭಾಗದ ಜನರಿಗೆ ಮಾತ್ರ ಸಿಲಿಂಡರ್ ಪಡೆಯಲು ಇಷ್ಟೊಂದು ತೊಂದರೆ ಎದುರಾಗುತ್ತಿರುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಇದು ಜಿಲ್ಲಾಡಳಿತದ ವೈಫಲ್ಯವೇ ಅಥವಾ “ಇವತ್ತಲ್ಲ ನಾಳೆ ಸಿಗುತ್ತದೆ” ಎಂಬ ತಾತ್ಸಾರ ಮನೋಭಾವವೇ ಎಂಬ ಅನುಮಾನವೂ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಗೆ ನಿಖರ ಕಾರಣವೇನು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಚಾಮರಾಜನಗರ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಹನೂರು ತಾಲೂಕಿನ ಪರಿಸ್ಥಿತಿಯನ್ನು ವೀಕ್ಷಿಸಲು ತೆರಳಿರುವುದು ಸ್ವಾಗತಾರ್ಹವಾದರೂ, ಗ್ರಾಮೀಣ ಜನರ ದಿನನಿತ್ಯದ ಬದುಕಿಗೆ ಅತ್ಯಗತ್ಯವಾಗಿರುವ ಅಡುಗೆ ಅನಿಲ ಸಮರ್ಪಕವಾಗಿ ದೊರೆಯದಿರುವ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಗ್ಯಾಸ್ ಪೂರೈಕೆ ಮತ್ತು ವಿತರಣೆಯಲ್ಲಿ ಯಾವುದೇ ಲೋಪವಾಗಿದ್ದರೆ ಅದನ್ನು ಪರಿಶೀಲಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ಗ್ರಾಮೀಣ ಪ್ರದೇಶಗಳಿಗೆ ನಿರಂತರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಅಡುಗೆ ಅನಿಲ ಸಿಲಿಂಡರ್‌ಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಡುಗೆ ಅನಿಲದ ಕೊರತೆಯಿಂದ ನೊಂದಿರುವ ಗ್ರಾಮಸ್ಥರನ್ನು ಸಂಘಟಿಸಿಕೊಂಡು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

