ನೌಕರರ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ: ಇಮ್ಮಡಿ ಸಿದ್ದೇಶ್ವರ ಶ್ರೀ

Spread the love

ನವಲಗುಂದ: ನೌಕರರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರನ್ನು ಮತ್ತಷ್ಟು ಸಾಧನೆಗೆ ಉತ್ತೇಜಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪಂಚಗ್ರಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶ್ರೀಗಳು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನವಲಗುಂದ ತಾಲೂಕು ಶಾಖೆ ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಸರ್ಕಾರಿ ನೌಕರರು ಹಾಗೂ ಪತ್ರಿಕಾ ಮಾಧ್ಯಮ ಮಿತ್ರರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಾರ್ಷಿಕ ಸರ್ವಸಾಧಾರಣ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶನಿವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಜರುಗಿದವು.

ಕಾರ್ಯಕ್ರಮವನ್ನು ಪಂಚಗ್ರಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶ್ರೀಗಳು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಳಿಕ ಮಾತನಾಡಿದ ಅವರು, ಸಂಘಗಳು ಒಗ್ಗಟ್ಟಿನಿಂದ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ತಮ್ಮ ಗುರಿಗಳನ್ನು ಯಶಸ್ವಿಯಾಗಿ ತಲುಪಲು ಸಾಧ್ಯ. ಸಂಘಟನೆಯಲ್ಲಿ ಸಮಾನತೆ ಕಾಪಾಡಿಕೊಂಡು ಎಲ್ಲರನ್ನೂ ಪ್ರತಿನಿಧಿಗಳೆಂದು ಪರಿಗಣಿಸಿ ನಿರ್ಧಾರಗಳನ್ನು ಕೈಗೊಂಡಾಗ ಸಂಘದ ಆಶಯಗಳು ಸಾಕಾರಗೊಳ್ಳುತ್ತವೆ. ನೌಕರರ ಹಿತಕ್ಕಾಗಿ ಸಂಘಟಿತ ಪ್ರಯತ್ನ ಅತ್ಯಂತ ಅವಶ್ಯಕವಾಗಿದೆ ಎಂದರು.

ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು

ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಿ ನೌಕರರ ಸಂಘ ನಿರಂತರವಾಗಿ ಶ್ರಮಿಸುತ್ತಿದೆ. ನವಲಗುಂದ ತಾಲೂಕು ನೌಕರರ ಸಂಘವು ಪ್ರತಿವರ್ಷ ಕ್ರಿಯಾಶೀಲವಾಗಿ ವಿವಿಧ ಸಮಾಜಮುಖಿ ಹಾಗೂ ನೌಕರರ ಹಿತಾಸಕ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.

ಸರ್ಕಾರಿ ನೌಕರರು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಪ್ರೀತಿ ಹಾಗೂ ವಿಶ್ವಾಸಕ್ಕೆ ಪಾತ್ರರಾಗಬೇಕು. ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ನಡೆಸುವ ವಿಚಾರವನ್ನು ಸರ್ಕಾರ ಸೂಕ್ತವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಎನ್‌ಪಿಎಸ್ ರದ್ದುಪಡಿಸಿ ಓಪಿಎಸ್ ಜಾರಿಗೆ ಪ್ರಯತ್ನ

ಧಾರವಾಡ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ಧನಗೌಡ್ರ ಮಾತನಾಡಿ, ರಾಜ್ಯ ಸಂಘದ ನಿರಂತರ ಪ್ರಯತ್ನದ ಫಲವಾಗಿ ನೌಕರರ ಬಹುಸಂಖ್ಯಾತ ಬೇಡಿಕೆಗಳು ಈಡೇರಿವೆ. ನೌಕರರ ಪ್ರಮುಖ ಬೇಡಿಕೆಯಾದ ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸುವ ನಿಟ್ಟಿನಲ್ಲಿ ತೀವ್ರ ಪ್ರಯತ್ನಗಳು ನಡೆಯುತ್ತಿವೆ. ನೌಕರರ ಹಿತಾಸಕ್ತಿಗಾಗಿ ತಾಲೂಕು ಶಾಖೆ ನಡೆಸುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.

ಸಂಘಟನೆ ಗಟ್ಟಿಯಾಗಿದ್ದರೆ ಬೇಡಿಕೆಗಳ ಈಡೇರಿಕೆ ಸಾಧ್ಯ

ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿ, ಸಂಘಟನೆ ನಮ್ಮ ಜೀವಾಳವಾಗಬೇಕು. ಸಂಘಟನೆ ಗಟ್ಟಿಯಾಗಿದ್ದಾಗ ಮಾತ್ರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ನೌಕರರ ಮಕ್ಕಳ ಸಾಧನೆಯನ್ನು ಗುರುತಿಸಿ ಪುರಸ್ಕರಿಸುವ ಮೂಲಕ ಅವರ ಬೆನ್ನಿಗೆ ನಿಲ್ಲುವ ಕೆಲಸವನ್ನು ಸಂಘ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಒತ್ತಡದ ಜೀವನದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆ. ನೌಕರರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಮೂಲಕ ಅವರನ್ನು ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸಿದಂತಾಗಿದೆ ಎಂದು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಲಗುಂದ ತಾಲೂಕು ಶಾಖೆಯ ಅಧ್ಯಕ್ಷ ವಿ.ಡಿ. ರಂಗಣ್ಣವರ ವಹಿಸಿದ್ದರು. ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ನೌಕರರ ಮಕ್ಕಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿವೃತ್ತ ಸರ್ಕಾರಿ ನೌಕರರು ಹಾಗೂ ಪತ್ರಿಕಾ ಮಾಧ್ಯಮ ಮಿತ್ರರನ್ನು ಗೌರವಿಸಲಾಯಿತು. ಇದೇ ವೇಳೆ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯದ ಕುರಿತು ಅಗತ್ಯ ಸಲಹೆ ಹಾಗೂ ಮಾಹಿತಿಯನ್ನು ನೀಡಲಾಯಿತು.

ಶಂಕರ್ ಪುರೋಹಿತ ಪ್ರಾರ್ಥಿಸಿದರು. ಎನ್.ವೈ. ಕಳಸಾಪೂರ ಸ್ವಾಗತಿಸಿದರು. ಎಲ್.ವೈ. ರಾಯಪ್ಪನವರ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ರವೀಂದ್ರಗೌಡ ಪಾಟೀಲ, ಸಿಡಿಪಿಒ ಗಾಯತ್ರೀದೇವಿ ಪಾಟೀಲ, ಮುಖ್ಯ ವೈದ್ಯಾಧಿಕಾರಿ ರೂಪಾ ಕಿನಗಿ, ಬಿಇಒ ಅರ್ಜುನ್ ಕಂಬೋಗಿ, ನಿವೃತ್ತ ಬಿಇಒ ಎಸ್.ಬಿ. ಮಲ್ಲಾಡ, ಎ.ಡಿ.ಎಲ್.ಆರ್ ಎಸ್.ಎಸ್. ಹಿರೇಗೌಡ್ರ, ಉಪ ಖಜಾನೆ ಅಧಿಕಾರಿ ಎಂ.ಐ. ಬೆಣಗಿ, ಗಂಗಾಧರ ಕತ್ತಿ, ವೈ.ಎಚ್. ಬಣವಿ, ಎಸ್.ಎಫ್. ನೀರಲಗಿ, ಪಿ.ಕೆ. ಹಿರೇಗೌಡ್ರ, ಎಂ.ಎ. ಹುಬ್ಬಳ್ಳಿ, ಲಿಂಗರಾಜ ಕಮತ, ಎಂ.ಎನ್. ವಗ್ಗರ, ವಿ.ಆರ್. ಹಾದಿಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳಾದ ದೇವಿದಾಸ ಶಾಂತಿಕರ, ಮಲ್ಲಿಕಾರ್ಜುನ ಸೊಲಗಿ, ರಮೇಶ ಲಿಂಗದಾಳ, ಮಂಜುನಾಥ ಯಡಳ್ಳಿ, ಪ್ರಕಾಶ ಹಳಪೇಟ, ರಾಜೇಶ ಕೋನರಡ್ಡಿ ಹಾಗೂ ಲಕ್ಷ್ಮಣ ರಜಪೂತ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *