ಡಿಸಿಆರ್‌ಇ ಪೊಲೀಸ್ ಸಿಬ್ಬಂದಿಗೆ ಕಷ್ಟ ಪರಿಹಾರ ಭತ್ಯೆ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

Spread the love

ಬೆಂಗಳೂರು: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರ್ನಾಟಕ ಸರ್ಕಾರ ಕಷ್ಟ ಪರಿಹಾರ ಭತ್ಯೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸಮಾಜ ಕಲ್ಯಾಣ ಇಲಾಖೆ ಆರ್ಥಿಕ ಇಲಾಖೆಯ ಸಮ್ಮತಿಯೊಂದಿಗೆ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ 33 ಡಿಸಿಆರ್‌ಇ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 626 ಸಿಬ್ಬಂದಿಗೆ ಇದರ ಪ್ರಯೋಜನ ದೊರೆಯಲಿದೆ.

ಸರ್ಕಾರದ ಆದೇಶದಂತೆ 33 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗಳು (ಪಿಎಸ್‌ಐ) ಹಾಗೂ 181 ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ತಲಾ ಮಾಸಿಕ ₹2,000 ಕಷ್ಟ ಪರಿಹಾರ ಭತ್ಯೆ ನೀಡಲಾಗುತ್ತದೆ. ಅಲ್ಲದೆ, 412 ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಮಾಸಿಕ ₹3,000 ಭತ್ಯೆ ಮಂಜೂರು ಮಾಡಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಮತ್ತು ನಾಗರಿಕ ಹಕ್ಕುಗಳ ರಕ್ಷಣೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದರಂತೆ ಹಾಗೂ ಬೆಂಗಳೂರು ನಗರದಲ್ಲಿ ಎರಡರಂತೆ ಒಟ್ಟು 33 ವಿಶೇಷ ಡಿಸಿಆರ್‌ಇ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಈ ಠಾಣೆಗಳ ಸಿಬ್ಬಂದಿ 24 ಗಂಟೆಯೂ ಕರ್ತವ್ಯ ನಿರ್ವಹಿಸಿ, ಬೀಟ್ ವ್ಯವಸ್ಥೆ, ಸ್ಥಳ ಪರಿಶೀಲನೆ ಹಾಗೂ ಸೂಕ್ಷ್ಮ ಪ್ರಕರಣಗಳ ತನಿಖೆಯಲ್ಲಿ ತೊಡಗಿರುತ್ತಾರೆ.

ಸಾಮಾನ್ಯ ಪೊಲೀಸ್ ಠಾಣೆಗಳ ಸಿಬ್ಬಂದಿಗೆ ನೀಡುತ್ತಿದ್ದ ಕಷ್ಟ ಪರಿಹಾರ ಭತ್ಯೆಯನ್ನು ಡಿಸಿಆರ್‌ಇ ಸಿಬ್ಬಂದಿಗೂ ವಿಸ್ತರಿಸುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸಿ ಅನುಮೋದಿಸಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸದಾ ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಡಿಸಿಆರ್‌ಇ ಸಿಬ್ಬಂದಿಗೆ ಆರ್ಥಿಕ ಹಾಗೂ ನೈತಿಕವಾಗಿ ಹೆಚ್ಚಿನ ಉತ್ತೇಜನ ನೀಡಲಿದೆ.

Leave a Reply

Your email address will not be published. Required fields are marked *