
ಕರ್ತವ್ಯ ಬಿಟ್ಟು ಪಿಡಿಒಗಳ ಎಣ್ಣೆ ಪಾರ್ಟಿ: ಸಾರ್ವಜನಿಕರ ತೆರಿಗೆ ಹಣದಲ್ಲಿ ಮೋಜು ಮಸ್ತಿಗೆ ತೀವ್ರ ಖಂಡನೆ
ನೆಲಮಂಗಲ: ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆಯಂತಹ ಅತ್ಯಂತ ಜವಾಬ್ದಾರಿಯುತ ಸರ್ಕಾರಿ ಕೆಲಸ ನೀಡಿದ್ದರೆ, ಅದನ್ನು ಗಾಳಿಗೆ ತೂರಿ ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಸಿಬ್ಬಂದಿಗಳು ಮಧ್ಯಾಹ್ನದ ವೇಳೆಯಲ್ಲೇ ಕುಡಿದು ಎಂಜಾಯ್ ಮಾಡುತ್ತಿರುವ ಕೃತ್ಯ ನೆಲಮಂಗಲ ತಾಲೂಕಿನಲ್ಲಿ ಇಂದು ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳ ಈ ಬೇಜವಾಬ್ದಾರಿ ಹಾಗೂ ದರ್ಬಾರ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿದೆ.
ನೆಲಮಂಗಲ ತಾಲೂಕಿನ ಡಾಬಸ್ಪೇಟೆ ಬಳಿಯ ಸಿದ್ದರಬೆಟ್ಟದ ತಪ್ಪಲಿನಲ್ಲಿ ದಾಬಸ್ಪೇಟೆ, ಸೋಮಪುರ ಹೋಬಳಿ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಪಿಡಿಒಗಳು ಮತ್ತು ಸಿಬ್ಬಂದಿಗಳು ಸರ್ಕಾರಿ ಕೆಲಸದ ವೇಳೆಯಲ್ಲಿ ಕಚೇರಿಯಲ್ಲೇ ಇರದೆ ಗುಂಡು-ತುಂಡು ಪಾರ್ಟಿ ಆಯೋಜಿಸಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ವಿಡಿಯೋ ಮಾಡಲು ಮುಂದಾಗುತ್ತಿದ್ದಂತೆ, ಅಧಿಕಾರಿಗಳು ಮದ್ಯದ ಬಾಟಲಿಗಳನ್ನು ಎಸೆದು ಬೆಟ್ಟ-ಗುಡ್ಡಗಳಲ್ಲಿ ಎದ್ದುಬಿದ್ದು ಪರಾರಿಯಾಗಿದ್ದಾರೆ. ಕರ್ತವ್ಯದ ಸಮಯದಲ್ಲಿ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡದೆ ಈ ರೀತಿ ಎಣ್ಣೆ ಪಾರ್ಟಿ ಮಾಡುತ್ತಿರುವ ಅಧಿಕಾರಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಒ ವಾಸಂತಿ ಅಮರ್ ಅವರು ಪಾರ್ಟಿಯಲ್ಲಿ ಭಾಗಿಯಾದ ಎಲ್ಲ ಪಿಡಿಒಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ. ಅಧಿಕಾರಿಗಳಿಂದ ಉತ್ತರ ಬಂದ ನಂತರ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರು ಕಷ್ಟಪಟ್ಟು ಕಟ್ಟುವ ತೆರಿಗೆ ಹಣದಿಂದ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳೇ ಈ ರೀತಿ ಕರ್ತವ್ಯ ಲೋಪ ಎಸಗಿ ಸರ್ಕಾರಕ್ಕೆ ಹಾಗೂ ಜನರಿಗೆ ದ್ರೋಹ ಬಗೆದರೆ ಗ್ರಾಮ ಪಂಚಾಯಿತಿಗಳು ಹೇಗೆ ಉದ್ಧಾರವಾಗಲು ಸಾಧ್ಯ? ಜನಸಾಮಾನ್ಯರನ್ನು ಅಲೆಯುವಂತೆ ಮಾಡಿ ಕೆಲಸದ ವೇಳೆಯಲ್ಲಿ ಮದ್ಯಪಾನ ಮಾಡಿ ಮೋಜು ಮಾಡುವ ಇಂತಹ ಭ್ರಷ್ಟ ಮತ್ತು ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬುದಕ್ಕೆ ತಕ್ಷಣವೇ ಉತ್ತರ ನೀಡಬೇಕಿದೆ.

