ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ: ಅರ್ಹರಿಗೆ ಸೌಲಭ್ಯ ತಲುಪಿಸಲು ಅಧಿಕಾರಿಗಳಿಗೆ ಸೂಚನೆ – ಎಸ್.ಆರ್. ಪಾಟೀಲ

Spread the love

ಧಾರವಾಡ: ಮಳೆ ಅಥವಾ ಇತರೆ ಕಾರಣಗಳಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡರೆ ಹೆಸ್ಕಾಂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು. ಅಲ್ಲದೆ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಸೂಚಿಸಿದರು.

ಭಾನುವಾರ (ಜು.6) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೆಪಿಟಿಸಿಎಲ್ (ಕೆಇಬಿ) ಸರ್ವೆ ಕಾರ್ಯ ಆರಂಭಗೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುವವರು ಕೈಬರಹದ ಬಾಡಿಗೆ ಪತ್ರ ಹಾಗೂ ಆಧಾರ್ ಕಾರ್ಡ್ ಸಲ್ಲಿಸಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದು. ಲೈನ್‌ಮನ್‌ಗಳು ಕಡ್ಡಾಯವಾಗಿ ಸುರಕ್ಷತಾ ಕಿಟ್ ಧರಿಸಿ ಕೆಲಸ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

ಯುವನಿಧಿ ಯೋಜನೆಯಡಿ ಯುವಕರು ಹಾಗೂ ಯುವತಿಯರಿಗೆ ತರಬೇತಿ ವ್ಯವಸ್ಥೆ ಕಲ್ಪಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು. ಕೋಚಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು. ಗ್ರಾಮ ಮಟ್ಟದಲ್ಲಿ ಸಭೆಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಮಾಹಿತಿ ಶಿಬಿರಗಳನ್ನು ಆಯೋಜಿಸಿ ನಿರುದ್ಯೋಗಿ ಯುವಕರಿಗೆ ಯೋಜನೆಯ ಪ್ರಯೋಜನಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಹತೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಮಾಹಿತಿ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮರಣ ಹೊಂದಿದ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ ಸಂಬಂಧಿತ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಬೇಕು. ಬಸ್ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಸ್ವಚ್ಛತೆಯನ್ನು ಪರಿಶೀಲಿಸಿ, ಅಸ್ವಚ್ಛತೆ ಕಂಡುಬಂದರೆ ಸಂಬಂಧಿಸಿದ ಸಿಬ್ಬಂದಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರದ ನಿರ್ದೇಶನದಂತೆ ಎಲ್ಲ ಅನ್ನಭಾಗ್ಯ ನ್ಯಾಯಬೆಲೆ ಅಂಗಡಿಗಳಲ್ಲಿ ಮುಖ್ಯಮಂತ್ರಿ ಹಾಗೂ ಆಹಾರ ಸಚಿವರ ಭಾವಚಿತ್ರ ಮತ್ತು ಮಾಹಿತಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಧಾನ್ಯಗಳ ದರಪಟ್ಟಿ, ಲಭ್ಯವಿರುವ ದಾಸ್ತಾನು ಹಾಗೂ ವಿತರಣೆಯ ದಿನಾಂಕದ ಮಾಹಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮೃತಪಟ್ಟ ನಂತರ ಅವರ ಖಾತೆಗೆ ಜಮೆಯಾಗಿರುವ ಹಣವನ್ನು ಸರ್ಕಾರಕ್ಕೆ ಮರಳಿ ವಸೂಲಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು. ಮೃತಪಟ್ಟ ಫಲಾನುಭವಿಗಳ ಖಾತೆಯಿಂದ ಬೇರೆ ಖಾತೆಗೆ ಹಣ ವರ್ಗಾವಣೆಗೊಂಡಿರುವ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಮರುಪಾವತಿಯಾಗದ ಪ್ರಕರಣಗಳನ್ನು ಪತ್ತೆಹಚ್ಚಿ ಶೀಘ್ರವೇ ವಸೂಲಿ ಮಾಡುವಂತೆ ಸೂಚಿಸಲಾಗಿದೆ ಎಂದರು.

ಮೃತ ಫಲಾನುಭವಿಗಳ ಖಾತೆಯಿಂದ ಕುಟುಂಬದವರು ಎಟಿಎಂ ಮೂಲಕ ಹಣ ಪಡೆದಿದ್ದರೆ, ಆ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿಸಬೇಕು. ಹಣವನ್ನು ಮರಳಿ ಪಾವತಿಸದಿದ್ದಲ್ಲಿ ಸಂಬಂಧಿತ ಕುಟುಂಬಗಳಿಗೆ ದೊರೆಯುವ ಮುಂದಿನ ಸರ್ಕಾರಿ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯಾ ವಿರಕ್ತಮಠ, ಶಾಂತಪ್ಪ ಎಸ್. ಅಕ್ಕಿ, ರೇಹನ್ ರಝಾ ಐನಾಪೂರಿ, ರತ್ನಾ ತೇಗೂರಮಠ ಹಾಗೂ ಸುಧೀರ ಎಸ್. ಬೋಳಾರ ಮಾತನಾಡಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊಗಲಬಾವಿ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ವಿನಾಯಕ ಕುರುಬರ, ಬಸಪ್ಪ ಮಹಾಬಲೇಶ್ವರ ಬಾವಕಾರ, ಮಂಜುನಾಥ ಮಾಯಣ್ಣವರ, ವರ್ಧಮಾನ ಹಿರೇಗೌಡರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲೆಯ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಕುರಿತು ಮಾಹಿತಿ ನೀಡಲಾಗಿದ್ದು, ಯುವನಿಧಿ ಯೋಜನೆಯಡಿ ಇದುವರೆಗೆ 12,448 ಅರ್ಜಿಗಳು ಸ್ವೀಕೃತವಾಗಿದ್ದು, ಡಿಬಿಟಿ ಮೂಲಕ 10,350 ಫಲಾನುಭವಿಗಳಿಗೆ ₹32,08,57,000 ಸಹಾಯಧನ ಜಮೆಯಾಗಿದೆ. ಶಕ್ತಿ ಯೋಜನೆ ಆರಂಭವಾದ ಬಳಿಕ ಇದುವರೆಗೆ 41,13,76,389 ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದು, ಸರ್ಕಾರ ₹9,07,77,02,994 ಬಿಡುಗಡೆ ಮಾಡಿದೆ.

ಗೃಹಜ್ಯೋತಿ ಯೋಜನೆಯಡಿ 5,08,244 ಫಲಾನುಭವಿಗಳಿಗೆ ಒಟ್ಟು ₹77,856.68 ಲಕ್ಷ ಬಿಡುಗಡೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 3,77,912 ಫಲಾನುಭವಿಗಳಿಗೆ ₹21,94,80,68,000 ಬಿಡುಗಡೆ ಮಾಡಲಾಗಿದ್ದು, ಅನ್ನಭಾಗ್ಯ ಯೋಜನೆಯಡಿ 3,75,996 ಫಲಾನುಭವಿಗಳಿಗೆ ಒಟ್ಟು ₹3,62,516 ಲಕ್ಷ ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published. Required fields are marked *