ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಸಚಿವ ಸತೀಶ ಜಾರಕಿಹೊಳಿ

Spread the love

ಧಾರವಾಡ, ಜು.4: ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯ ಕೊರತೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಲೋಕೋಪಯೋಗಿ ಹಾಗೂ ಧಾರವಾಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಮೇಲುಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಮಳೆಯ ಕೊರತೆಯಿಂದ ಹಾನಿಯಾಗುವ ಸಾಧ್ಯತೆ ಇದ್ದು, ಬೆಳೆ ಸಮೀಕ್ಷೆ ವರದಿ ಬಂದ ಬಳಿಕ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯ ಕೊರತೆ ಮುಂದುವರಿದಲ್ಲಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆಗಳನ್ನು ತುಂಬಿಸುವುದು ಅತ್ಯಂತ ಪರಿಣಾಮಕಾರಿ ಕ್ರಮವಾಗಿದ್ದು, ಮಲಪ್ರಭಾ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಕೂಡಲೇ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭಿಸಬೇಕು. ಹುಬ್ಬಳ್ಳಿ-ಧಾರವಾಡದಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಹಾಗೂ ಎಲ್‌ ಆ್ಯಂಡ್‌ ಟಿ ಕಂಪನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸೂಚಿಸಿದರು.

ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಬೆಳೆ ವಿಮೆ ಹೆಸರಿನಲ್ಲಿ ಏಜೆಂಟರ ಹಾವಳಿ ಹೆಚ್ಚಾಗುತ್ತಿದ್ದು, ರೈತರಿಗೆ ವಿಮೆ ಮೊತ್ತ ಸಂಪೂರ್ಣವಾಗಿ ತಲುಪುವಂತೆ ನೋಡಿಕೊಳ್ಳಬೇಕು. ರೈತರನ್ನು ವಂಚಿಸುವ ಏಜೆಂಟರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಅಬ್ಬಯ್ಯ ಪ್ರಸಾದ್ ಮಾತನಾಡಿ, ರೈತರ ಬೆಳೆ ಸಮೀಕ್ಷೆ ನಡೆಸಿ ಬೆಳೆ ನಷ್ಟವಾದಲ್ಲಿ ಸಕಾಲದಲ್ಲಿ ಬೆಳೆ ವಿಮೆ ಪರಿಹಾರ ಪಾವತಿಸಬೇಕು. ರೈತರಿಗೆ ಗೊಬ್ಬರ ಹಾಗೂ ಮೇವಿನ ಕೊರತೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ಹೇಳಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಬೆಳೆ ವಿಮೆ ಪ್ರಕರಣಗಳಲ್ಲಿ ಬೆಳೆ ಹೊಂದಾಣಿಕೆ ಸಮಸ್ಯೆಯಿಂದ ರೈತರಿಗೆ ಪರಿಹಾರ ವಿಳಂಬವಾಗುತ್ತಿದೆ. ಹೆಚ್ಚಿನ ಪರಿಹಾರ ಕೊಡಿಸುತ್ತೇವೆ ಎಂದು ರೈತರನ್ನು ವಂಚಿಸುವ ಏಜೆಂಟರ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಮಳೆ ಕೊರತೆ ಮುಂದುವರಿದಲ್ಲಿ ಮೋಡ ಬಿತ್ತನೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಭೆಗೆ ಮಾಹಿತಿ ನೀಡಿ, ಜೂನ್ 1ರಿಂದ 30ರವರೆಗೆ ಜಿಲ್ಲೆಯ ವಾಡಿಕೆ 124.08 ಮಿ.ಮೀ. ಮಳೆಯ ಬದಲಾಗಿ 95.5 ಮಿ.ಮೀ. ಮಳೆಯಾಗಿದ್ದು, 23 ಮಿ.ಮೀ. ಕೊರತೆಯಾಗಿದೆ. ಜೂನ್ 1ರಿಂದ ಜುಲೈ 4ರವರೆಗೆ ವಾಡಿಕೆ 142.5 ಮಿ.ಮೀ. ಮಳೆಯ ಬದಲಾಗಿ 103.9 ಮಿ.ಮೀ. ಮಳೆಯಾಗಿದ್ದು, 27 ಮಿ.ಮೀ. ಮಳೆ ಕೊರತೆ ದಾಖಲಾಗಿದೆ. ಜಿಲ್ಲೆಯ ಎಂಟು ತಾಲೂಕುಗಳ ಪೈಕಿ ಕುಂದಗೋಳ ತಾಲೂಕಿನಲ್ಲಿ ಮಾತ್ರ ಅಧಿಕ ಮಳೆಯಾಗಿದ್ದು, ಉಳಿದ ಏಳು ತಾಲೂಕುಗಳಲ್ಲಿ ಸಾಧಾರಣ ಮಳೆ ಕೊರತೆ ಕಂಡುಬಂದಿದೆ ಎಂದು ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ 2,82,677 ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ 2,55,191 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ.90.28ರಷ್ಟು ಗುರಿ ಸಾಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 54,648 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, 28,586 ಮೆಟ್ರಿಕ್ ಟನ್ ಮಾರಾಟವಾಗಿದ್ದು, 27,832 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ ಎಂದು ವಿವರಿಸಿದರು.

ಬಿತ್ತನೆ ಬೀಜಗಳ ಪೂರೈಕೆ ಸಮರ್ಪಕವಾಗಿದ್ದು, ವಿವಿಧ ಬೆಳೆಗಳಿಗೆ ಒಟ್ಟು 17,703 ಕ್ವಿಂಟಲ್ ಬೀಜ ಪೂರೈಕೆಯಾಗಿದ್ದು, 15,838 ಕ್ವಿಂಟಲ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಧಾರವಾಡ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕಿನ ಒಟ್ಟು 20 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ 100 ವಾರ್ಡ್‌ಗಳಲ್ಲಿ ಯಾವುದೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. 80 ವಾರ್ಡ್‌ಗಳಿಗೆ ಪ್ರತಿದಿನ ಹಾಗೂ ಉಳಿದ 20 ವಾರ್ಡ್‌ಗಳಿಗೆ 2ರಿಂದ 3 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಲ್ಲಿ 13 ವಾರ್ಡ್‌ಗಳಿಗೆ 24×7 ನೀರು ಪೂರೈಕೆಯಾಗುತ್ತಿದ್ದು, ಉಳಿದ ವಾರ್ಡ್‌ಗಳಿಗೆ 2ರಿಂದ 7 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 4.44 ಲಕ್ಷ ಟನ್‌ಗಿಂತ ಹೆಚ್ಚು ಮೇವು ದಾಸ್ತಾನು ಲಭ್ಯವಿದ್ದು, ಮುಂದಿನ 52 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹವಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಏಳು ಮೇವು ಬ್ಯಾಂಕ್‌ಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೂರ್ವ ಮುಂಗಾರು ಅವಧಿಯಲ್ಲಿ ಒಂದು ಮನೆ ಸಂಪೂರ್ಣ ಹಾಗೂ ಐದು ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಒಟ್ಟು ₹1.52 ಲಕ್ಷ ಪರಿಹಾರ ವಿತರಿಸಲಾಗಿದೆ. ಸಿಡಿಲು ಬಡಿದು ಧಾರವಾಡ ತಾಲೂಕಿನ ಕವಲಗೇರಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗಿದೆ. ಮಳೆ ಕೊರತೆಯಿಂದ ಮುಂಗಾರು ಅವಧಿಯಲ್ಲಿ ಯಾವುದೇ ಪ್ರಕೃತಿ ವಿಕೋಪ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಎಂ.ಆರ್. ಪಾಟೀಲ, ಎಫ್.ಎಚ್. ಜಕಪ್ಪನವರ, ಅರವಿಂದ ಬೆಲ್ಲದ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕಿರ್ ಸನದಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಉಪಸ್ಥಿತರಿದ್ದರು.

ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಎಸ್. ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ತಾಲೂಕಿನ ತಹಶೀಲ್ದಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *