
ವಿಜಯಪುರ: ಗೋವಾದಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ವಿವಿಧ ಬ್ರಾಂಡ್‌ಗಳ ಮದ್ಯವನ್ನು ವಿಜಯಪುರ ಪೊಲೀಸರು ವಶಪಡಿಸಿಕೊಂಡಿದ್ದು, ಸುಮಾರು ₹74.68 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರ ಉಪವಿಭಾಗದ ಪೊಲೀಸರು ಗಸ್ತಿನಲ್ಲಿದ್ದ ವೇಳೆ ಮಂಗಳವಾರ ನಸುಕಿನ ಸುಮಾರು 5.30 ಗಂಟೆಗೆ ಕೊಲ್ಹಾರ ನಾಕಾ ಸಮೀಪ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಲಾರಿಯಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆಯ ಜಲ್ಲಿಗೇರಿಯ ಶ್ರೀನಿವಾಸ ಮೀಸಿ, ವಿಜಯಪುರದ ಗಾಂಧಿನಗರದ ಹುಸೇನ್ ಸಾಬ್ ಮುಲ್ಲಾ, ಮಹಾರಾಷ್ಟ್ರದ ಸೋಲಾಪುರದ ಸಿದ್ದರಾಮ್ ಡಾಲೆ ಹಾಗೂ ವಿಜಯಪುರದ ಕಾಳಿಕಾ ನಗರದ ಬಸವರಾಜ ಭಜಂತ್ರಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ತಾಡಪತ್ರೆಯಿಂದ ಮುಚ್ಚಲಾಗಿದ್ದ ಲಾರಿಯನ್ನು ಪರಿಶೀಲಿಸಿದಾಗ ಅದರ ಮೇಲ್ಭಾಗ ಮತ್ತು ಹಿಂಭಾಗದಲ್ಲಿ ಎರೆಹುಳುವಿನ ಗೊಬ್ಬರದ ಚೀಲಗಳನ್ನು ಇಡಲಾಗಿತ್ತು. ಅವುಗಳನ್ನು ತೆರವುಗೊಳಿಸಿ ಪರಿಶೀಲಿಸಿದ ವೇಳೆ ವಿವಿಧ ಬ್ರಾಂಡ್‌ಗಳ ಮದ್ಯದ ಬಾಟಲಿಗಳಿದ್ದ ರಟ್ಟಿನ ಪೆಟ್ಟಿಗೆಗಳು ಪತ್ತೆಯಾಗಿವೆ. ಮದ್ಯ ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಆರೋಪಿಗಳ ಬಳಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಗೋವಾದ ಪಣಜಿಯಿಂದ ಮಹಾರಾಷ್ಟ್ರದತ್ತ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಲಾರಿಯನ್ನು ಎಲ್ಲಿಗೆ ಕೊಂಡೊಯ್ಯಬೇಕು ಹಾಗೂ ಎಲ್ಲಿ ನಿಲ್ಲಿಸಬೇಕು ಎಂಬ ಸೂಚನೆಗಳನ್ನು ಚಾಲಕರಿಗೆ ಗೂಗಲ್ ಲೊಕೇಶನ್ ಮೂಲಕ ನೀಡಲಾಗುತ್ತಿತ್ತು. ಸೂಚಿಸಿದ ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸಿದ ಬಳಿಕ ಮತ್ತೊಬ್ಬರು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.
ಜಪ್ತಿ ಮಾಡಲಾದ ಮದ್ಯದ ಮೌಲ್ಯವನ್ನು ಗೋವಾ ರಾಜ್ಯದ ದರದ ಪ್ರಕಾರ ಲೆಕ್ಕ ಹಾಕಿದರೆ ₹74,68,560 ಆಗುತ್ತದೆ. ಅದೇ ಮದ್ಯದ ಮೌಲ್ಯವನ್ನು ಕರ್ನಾಟಕದ ದರದ ಆಧಾರದಲ್ಲಿ ಲೆಕ್ಕ ಹಾಕಿದರೆ ₹1,36,82,880 ಆಗುತ್ತದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ವಿಜಯಪುರ ಉಪವಿಭಾಗದ ಡಿಎಸ್‌ಪಿ ನಾಗರಾಜ್ ಜೆ. ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

