
ಲಕ್ಷ್ಮೇಶರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳ ಅವಧಿ ಮುಗಿದಿದ್ದು, ಅವುಗಳನ್ನು ತೆರವುಗೊಳಿಸಿ ಹೊಸದಾಗಿ ಟೆಂಡರ್ ಕರೆದು ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಮಂಗಳವಾರ ಹೋರಾಟ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಸುಮಾರು ಏಳು ಮಳಿಗೆಗಳನ್ನು ಸೀಜ್ ಮಾಡಿದ್ದರು. ಆದರೆ ಬುಧವಾರ ಅದೇ ಮಳಿಗೆಗಳನ್ನು ಮತ್ತೆ ತೆರೆಯಲಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ವಾಣಿಜ್ಯ ಸಂಕೀರ್ಣದಲ್ಲಿರುವ ಕೆಲ ವ್ಯಾಪಾರಸ್ಥರು ಮಳಿಗೆಗಳ ತೆರವು ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ನಿಂದ ತಡೆಯಾಜ್ಞೆ ಪಡೆದಿದ್ದರು. ಈ ಹಿನ್ನಲೆಯಲ್ಲಿ ಬುಧವಾರ ಪುರಸಭೆ ಅಧಿಕಾರಿಗಳು ಸೀಜ್ ಮಾಡಿದ್ದ ಮಳಿಗೆಗಳನ್ನು ಪುನಃ ತೆರೆಯಲು ಮುಂದಾದರು. ಮಳಿಗೆಗಳು ತೆರೆಯುತ್ತಿದ್ದಂತೆ ಅಲ್ಲಿನ ವ್ಯಾಪಾರಸ್ಥರು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರವೇ ಪ್ರವೀಣ ಶೆಟ್ಟಿ ಬಣದ ಮುಖಂಡ ಮಹೇಶ ಕಲಘಟಗಿ ಹಾಗೂ ಡಿಎಸ್ಎಸ್ ಮುಖಂಡ ಸುರೇಶ ನಂದೆಣ್ಣವರ ಪುರಸಭೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕೋರ್ಟ್ನಿಂದ ತಡೆಯಾಜ್ಞೆ ಇದ್ದರೂ ಅಂಗಡಿಗಳನ್ನು ಸೀಜ್ ಮಾಡಿರುವುದು ಸರಿಯಲ್ಲ. ಇದರಿಂದ ವ್ಯಾಪಾರಸ್ಥರಿಗೆ ಅನಗತ್ಯ ತೊಂದರೆ ಉಂಟಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಾತನಾಡಿದ ಮಹೇಶ ಕಲಘಟಗಿ ಹಾಗೂ ಸುರೇಶ ನಂದೆಣ್ಣವರ, ಅಧಿಕಾರಿಗಳು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು. ವಾಣಿಜ್ಯ ಮಳಿಗೆಗಳಲ್ಲಿ ಚಿಕನ್ ಹಾಗೂ ಮಟನ್ ಮಾರಾಟ ಮಾಡುವುದರ ಬಗ್ಗೆ ನಮ್ಮ ವಿರೋಧವಿದ್ದರೂ, ತೆರವುಗೊಳಿಸುವ ಮುನ್ನ ವ್ಯಾಪಾರಸ್ಥರಿಗೆ ಸೂಕ್ತ ಕಾಲಾವಕಾಶ ನೀಡಬೇಕಾಗಿತ್ತು. ಏಕಾಏಕಿ ಮಳಿಗೆಗಳನ್ನು ಸೀಜ್ ಮಾಡಿರುವುದು ಸರಿಯಾದ ಕ್ರಮವಲ್ಲ. ಇದು ವ್ಯಾಪಾರಸ್ಥರ ಮೇಲಿನ ದೌರ್ಜನ್ಯವಾಗಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ವೈಫಲ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಸಮಸ್ಯೆಗೆ ಕಾನೂನುಬದ್ಧ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಘಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರೈಂ ವಿಭಾಗದ ಪಿಎಸ್ಐ ಟಿ.ಕೆ. ರಾಠೋಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಪುರಸಭೆಯ ಕಂದಾಯ ಅಧಿಕಾರಿ ಸುರೇಶ ಪೂಜಾರ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಬಸವರಾಜ ಹೊಗೆಸೊಪ್ಪಿನ, ಅನಿಲ ಮುಳಗುಂದ, ಬಸವಣ್ಣೆಪ್ಪ ನಂದೆಣ್ಣವರ, ಶಿವು ಕರಡಿ ಸೇರಿದಂತೆ ಹಲವು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

