
ಧಾರವಾಡ, ಜೂ. 8: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಮೂರು ದಿನಗಳವರೆಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಹಾಗೂ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿರಂತರ ಮಳೆಯಿಂದ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ತಿಳಿಸಿದ್ದಾರೆ. ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಪ್ರದೇಶಗಳಲ್ಲಿ, ನಗರಗಳ ತಗ್ಗು ಪ್ರದೇಶಗಳಲ್ಲಿ, ಕಲ್ಲಿನ ಕ್ವಾರಿಗಳು, ಕಾಲುವೆಗಳು, ಕೃಷಿ ಹೊಂಡಗಳು, ತುಂಬಿ ಹರಿಯುವ ಚರಂಡಿಗಳು ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಬಳಿ ಸಾರ್ವಜನಿಕರು ಆಟವಾಡುವುದು, ಈಜುವುದು ಹಾಗೂ ಅನಗತ್ಯವಾಗಿ ಸಂಚರಿಸುವುದನ್ನು ತಪ್ಪಿಸಬೇಕು ಎಂದು ಸೂಚಿಸಿದ್ದಾರೆ.
ಭಾರಿ ಮಳೆಯಿಂದಾಗಿ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಳುಗಿರುವ ಸೇತುವೆಗಳು ಹಾಗೂ ಮೇಲ್ಮಟ್ಟದಲ್ಲಿ ನೀರು ಹರಿಯುವ ಕಲ್ವರ್ಟ್ಗಳನ್ನು ದಾಟಲು ಯಾವುದೇ ಕಾರಣಕ್ಕೂ ಪ್ರಯತ್ನಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಜನರು ಮತ್ತು ಜಾನುವಾರುಗಳು ನೀರಿನ ಸೆಳೆತಕ್ಕೆ ಸಿಲುಕುವ ಅಪಾಯ ಇರುವುದರಿಂದ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಹಳ್ಳ-ಕೊಳ್ಳಗಳು, ಜಲಪಾತಗಳು, ಕೆರೆಗಳು ಹಾಗೂ ಕೃಷಿ ಹೊಂಡಗಳಲ್ಲಿ ಅಪಾಯ ಮಟ್ಟಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೆಲ್ಫಿ ಅಥವಾ ಛಾಯಾಚಿತ್ರಗಳನ್ನು ತೆಗೆಯಲು ನೀರಿನ ಸಮೀಪಕ್ಕೆ ಹೋಗಬಾರದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ವಿಶೇಷವಾಗಿ ಪ್ರವಾಹ ಪೀಡಿತ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರವಾಹದ ಸಂದರ್ಭಗಳಲ್ಲಿ ಶಿಥಿಲಗೊಂಡ ಸೇತುವೆಗಳು, ತೆರೆದಿರುವ ಮ್ಯಾನ್ಹೋಲ್ಗಳು ಹಾಗೂ ಹಾನಿಗೊಂಡ ರಸ್ತೆಗಳಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದ್ದು, ನೀರಿನ ಸೆಳೆತದಿಂದ ಗಂಭೀರ ಅನಾಹುತಗಳು ಸಂಭವಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, ನೀರಿನಿಂದ ಆವೃತಗೊಂಡಿರುವ ವಿದ್ಯುತ್ ಸ್ಥಾವರಗಳು, ಮುರಿದು ಬಿದ್ದ ವಿದ್ಯುತ್ ಕಂಬಗಳು ಹಾಗೂ ಕಡಿತಗೊಂಡ ವಿದ್ಯುತ್ ತಂತಿಗಳ ಸಮೀಪ ಹೋಗಬಾರದು. ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದನ್ನೂ ತಪ್ಪಿಸಬೇಕು ಎಂದು ಸೂಚಿಸಿದ್ದಾರೆ.
ನಿರಂತರ ಮಳೆಯಿಂದ ಅಪಾಯದಲ್ಲಿರುವ ಮನೆಗಳು, ಗೋಡೆಗಳು ಹಾಗೂ ಇತರೆ ಕಟ್ಟಡಗಳು ಕುಸಿಯುವ ಸಂಭವವಿದ್ದು, ಶಿಥಿಲಗೊಂಡ ಮರಗಳು ಕೂಡ ಬೀಳುವ ಸಾಧ್ಯತೆ ಇದೆ. ಇದರಿಂದ ಸಾವು-ನೋವುಗಳು ಸಂಭವಿಸುವ ಅಪಾಯ ಇರುವುದರಿಂದ ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ ಸಂಖ್ಯೆ 0836-2445508 ಹಾಗೂ 1077, ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿ 0836-2233860, ಹುಬ್ಬಳ್ಳಿ ನಗರ ತಹಶೀಲ್ದಾರರ ಕಚೇರಿ 0836-2358035, ಅಳ್ನಾವರ ತಹಶೀಲ್ದಾರರ ಕಚೇರಿ 0836-2385544, ನವಲಗುಂದ ತಹಶೀಲ್ದಾರರ ಕಚೇರಿ 08380-229240, ಕುಂದಗೋಳ ತಹಶೀಲ್ದಾರರ ಕಚೇರಿ 08304-290239, ಹುಬ್ಬಳ್ಳಿ ತಹಶೀಲ್ದಾರರ ಕಚೇರಿ 0836-2238449, ಧಾರವಾಡ ತಹಶೀಲ್ದಾರರ ಕಚೇರಿ 0836-2233822, ಕಲಘಟಗಿ ತಹಶೀಲ್ದಾರರ ಕಚೇರಿ 08370-284535, ಅಣ್ಣಿಗೇರಿ ತಹಶೀಲ್ದಾರರ ಕಚೇರಿ 9482151566 ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ 0836-2213869 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

