
ಧಾರವಾಡ: ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ (ಇ.ಇ) ದೇವರಾಜ ಶಿಗ್ಗಾಂವಿ ಹಾಗೂ ಅವರ ಆಪ್ತರ ಕಚೇರಿಗಳ ಮೇಲೆ ಶನಿವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. 2018 ರಿಂದ 2023ರ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದ ವಿವಿಧ ಕಾಮಗಾರಿಗಳಲ್ಲಿ ವ್ಯಾಪಕ ಅವ್ಯವಹಾರ ಎಸಗಿರುವ ಹಾಗೂ ಸರ್ಕಾರಕ್ಕೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಉಂಟು ಮಾಡಿರುವ ಗಂಭೀರ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ, ಏಕಕಾಲದಲ್ಲಿ ದಾಳಿ ನಡೆಸಿ ತಡರಾತ್ರಿಯವರೆಗೂ ಮಹತ್ವದ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿದೆ. ಇ.ಇ ದೇವರಾಜ ಶಿಗ್ಗಾಂವಿ ಅವರ ಕಚೇರಿ ಮಾತ್ರವಲ್ಲದೆ, ಅವರ ಅಳಿಯ ಹಾಗೂ ಗುತ್ತಿಗೆದಾರರಾಗಿರುವ ಶ್ರೀಕೃಷ್ಣ ಗಾಡಿವಡ್ಡರ ಮತ್ತು ಕ್ಲಾಸ್ ಒನ್ ಗುತ್ತಿಗೆದಾರ ಸುಮೀತ್ ಹೆಗಡೆ ಅವರ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.

ಈ ವೇಳೆ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದ ಹಲವು ಪ್ರಮುಖ ಕಡತಗಳು ಹಾಗೂ ಅಕ್ರಮಕ್ಕೆ ಪುಷ್ಟಿ ನೀಡುವಂತಹ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯಿಂದಲೇ ಮಹತ್ವದ ಮಾಹಿತಿ ಲಭ್ಯವಾಗುತ್ತಿದ್ದು, ಇ.ಇ ದೇವರಾಜ ಶಿಗ್ಗಾಂವಿ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದು, ವಶಪಡಿಸಿಕೊಂಡ ದಾಖಲೆಗಳ ಕ್ರೋಡೀಕರಣ ಕಾರ್ಯ ನಡೆಯುತ್ತಿದೆ. ತನಿಖೆಯ ಮುಂದಿನ ಹಂತದಲ್ಲಿ ಹೆಚ್ಚಿನ ಮಾಹಿತಿ ದೊರಕುವ ಸಾಧ್ಯತೆ ಇದ್ದು, ಪ್ರಕರಣದ ಕುರಿತು ಲೋಕಾಯುಕ್ತ ಇಲಾಖೆ ಹೆಚ್ಚಿನ ತನಿಖೆ ಮುಂದುವರಿಸಿದೆ.

