
ಮಳವಳ್ಳಿ: ಬೃಹತ್ ಗಾತ್ರದ ಹೆಬ್ಬಾವು ಜಿಂಕೆಯನ್ನು ನುಂಗಿದ ಬಳಿಕ ಚಲಿಸಲು ಹರಸಾಹಸ ಪಟ್ಟ ಅಪರೂಪದ ಘಟನೆ ಮಳವಳ್ಳಿ ತಾಲ್ಲೂಕಿನ ನೆಟ್ಕಲ್ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ.
ನೆಟ್ಕಲ್ ಗ್ರಾಮದ ಬಳಿ ಬೆಂಗಳೂರು ಜಲಮಂಡಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಹಾದು ಹೋಗುವ ಅರಣ್ಯ ಪ್ರದೇಶದ ಸಮೀಪ ಈ ಹೆಬ್ಬಾವು ಪತ್ತೆಯಾಗಿದೆ. ದೊಡ್ಡ ಗಾತ್ರದ ಜಿಂಕೆಯನ್ನು ನುಂಗಿದ್ದರಿಂದ ಹೆಬ್ಬಾವು ಚಲಿಸಲು ಸಾಧ್ಯವಾಗದೇ ಅಲ್ಲೇ ಕುಂಠಿತ ಸ್ಥಿತಿಯಲ್ಲಿ ಕಾಣಿಸಿಕೊಂಡಿದೆ.
ಈ ದೃಶ್ಯವನ್ನು ಗಮನಿಸಿದ ಸ್ಥಳೀಯ ರೈತರು ಹಾಗೂ ಜಾನುವಾರು ಮೇಯಿಸುತ್ತಿದ್ದ ಗ್ರಾಮಸ್ಥರು ಸ್ಥಳಕ್ಕೆ ಮುಗಿಬಿದ್ದು ಅಪರೂಪದ ದೃಶ್ಯವನ್ನು ವೀಕ್ಷಿಸಿದರು. ಹೆಬ್ಬಾವಿನ ಬೃಹತ್ ಗಾತ್ರ ಮತ್ತು ಅದರ ಸ್ಥಿತಿ ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಬಳಿಕ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

