
ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿದ ಹೋರಾಟ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ 12 ಮಂದಿ ಕಾಂಗ್ರೆಸ್ ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಸಲ್ಲಿಸಿದವರಲ್ಲಿ ಒಬ್ಬ ನಾಮನಿರ್ದೇಶಿತ ಸದಸ್ಯರೂ ಸೇರಿದ್ದಾರೆ. ಸದಸ್ಯರು ತಮ್ಮ ರಾಜೀನಾಮೆ ಪತ್ರಗಳನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ್ದು, ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
71ನೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ ಪತ್ರದಲ್ಲಿ 2ನೇ ವಾರ್ಡ್ ಸದಸ್ಯೆ ಸೂರವ್ವ ಪಾಟೀಲ, 4ನೇ ವಾರ್ಡ್ ಸದಸ್ಯ ರಾಜಶೇಖರ ಕಮತಿ, 6ನೇ ವಾರ್ಡ್ ಸದಸ್ಯೆ ದಿಲಶಾದ್ ಬೇಗಂ ನದಾಫ್, 7ನೇ ವಾರ್ಡ್ ಸದಸ್ಯೆ ದೀಪಾ ನೀರಲಕಟ್ಟಿ ಹಾಗೂ ನಾಮನಿರ್ದೇಶಿತ ಸದಸ್ಯ ಪ್ರಕಾಶ ಬಾಬುರಾವ ಘಾಟಗೆ ಸಹಿ ಹಾಕಿದ್ದಾರೆ.
74ನೇ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ ಮತ್ತೊಂದು ಪತ್ರದಲ್ಲಿ 14ನೇ ವಾರ್ಡ್ ಸದಸ್ಯ ಶಂಭುಗೌಡ ಸಾಲಮನಿ, 16ನೇ ವಾರ್ಡ್ ಸದಸ್ಯೆ ಪರ್ವಿನ್ ದೇಸಾಯಿ, 17ನೇ ವಾರ್ಡ್ ಸದಸ್ಯ ಗಣೇಶ ಮುಧೋಳ, 20ನೇ ವಾರ್ಡ್ ಸದಸ್ಯೆ ಕವಿತಾ ಕಬ್ಬೇರ, 22ನೇ ವಾರ್ಡ್ ಸದಸ್ಯೆ ಬಿಲ್ಕಿಸ್‌ಬಾನು ಮುಲ್ಲಾ, 23ನೇ ವಾರ್ಡ್ ಸದಸ್ಯ ಮಂಜುನಾಥ ಬಡಕುರಿ ಹಾಗೂ 24ನೇ ವಾರ್ಡ್ ಸದಸ್ಯ ಮಯೂರ ಮೋರೆ ಸಹಿ ಹಾಕಿದ್ದಾರೆ.
ಕಳೆದ ಹತ್ತು ದಿನಗಳಿಂದ ಧಾರವಾಡದಲ್ಲಿ ಪ್ರತ್ಯೇಕ ಪಾಲಿಕೆ ರಚನೆಗಾಗಿ ಹೋರಾಟ ನಡೆಯುತ್ತಿದ್ದು, ಇದು ಪಕ್ಷಾತೀತ ಹಾಗೂ ಜಾತ್ಯತೀತ ಹೋರಾಟವಾಗಿದೆ ಎಂದು ಸದಸ್ಯರು ಹೇಳಿದ್ದಾರೆ. “ನಮಗೆ ವೈಯಕ್ತಿಕ ಅಧಿಕಾರಕ್ಕಿಂತ ಜನರ ಹಿತ ಮತ್ತು ಅವರ ಭಾವನೆಗಳು ಮುಖ್ಯ. ಹೋರಾಟಕ್ಕೆ ಸಂಪೂರ್ಣ ಧ್ವನಿಯಾಗುವ ನಿಟ್ಟಿನಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇವೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯೆ ಕವಿತಾ ಕಬ್ಬೇರ, “ಪ್ರತ್ಯೇಕ ಪಾಲಿಕೆ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಹೋರಾಟಗಾರರ ಜತೆ ಸೇರಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕೆ ಅವಕಾಶ ನೀಡಬಾರದೆಂಬ ಕಾರಣದಿಂದಲೇ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಹೋರಾಟ ನಡೆಸುವ ಉದ್ದೇಶದಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ, ಸದಸ್ಯರ ರಾಜೀನಾಮೆ ಪತ್ರಗಳನ್ನು ಪಕ್ಷದ ಜಿಲ್ಲಾಧ್ಯಕ್ಷರಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

