
ಧಾರವಾಡ: ಇಂದಿನ ಮಕ್ಕಳಲ್ಲಿ ಮೊಬೈಲ್ ವ್ಯಸನ ಹೆಚ್ಚಾಗಿರುವ ಆತಂಕಕಾರಿ ಸಂದರ್ಭದಲ್ಲಿ, ಬೇಸಿಗೆ ಶಿಬಿರಗಳು ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಅವರಲ್ಲಿ ಸುಪ್ತವಾಗಿರುವ ಸೃಜನಶೀಲತೆಯನ್ನು ಹೊರತರಲು ಸಹಕಾರಿಯಾಗಿವೆ ಎಂದು ಚಿತ್ರದುರ್ಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಪ್ರಾಧ್ಯಾಪಕಿ ಪ್ರೊ. ಲಲಿತಾ ನಾಯಕ ಅವರು ಅಭಿಪ್ರಾಯಪಟ್ಟರು.
ನಗರದ ಲೇಕ್ ಸಿಟಿಯ ಸಾಂಸ್ಕೃತಿಕ ಭವನದಲ್ಲಿ ‘ರೈಜಿಂಗ್ ಸ್ಟಾರ್ಸ್ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ’ ಹಾಗೂ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ಯ ಸಹಯೋಗದಲ್ಲಿ ಆಯೋಜಿಸಿದ್ದ ‘ಮಕ್ಕಳ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಸಾಂಸ್ಕೃತಿಕ ವೇದಿಕೆಗಳು ಪೂರಕವಾಗಿವೆ. ಮೊದಲು ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ಮುಕ್ತಗೊಳಿಸುವತ್ತ ಗಮನ ಹರಿಸಬೇಕು. ಶಿಬಿರಗಳು ಕೇವಲ ಮನರಂಜನೆಯಾಗದೆ, ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಿರಿಯ ಜಾನಪದ ಕಲಾವಿದೆ ಡಾ. ಪಾರ್ವತೆವ್ವ ಸಿದ್ದಪ್ಪ ಹೊಂಗಲ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಮತ್ತು ಸಂಗೀತ ನಮ್ಮ ಉಸಿರಾಗಿದ್ದು, ಅದನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಿ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈಜಿಂಗ್ ಸ್ಟಾರ್ಸ್ ಅಕಾಡೆಮಿಯ ಅಧ್ಯಕ್ಷ ಡಾ. ಪ್ರಕಾಶ ಮಲ್ಲಿಗವಾಡ ಅವರು ಶಿಬಿರದ ಮಹತ್ವ ಮತ್ತು ಅಕಾಡೆಮಿಯ ಕಾರ್ಯಚಟುವಟಿಕೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ವೇದಿಕೆಯಲ್ಲಿ ಉದ್ಯಮಿ ರಾಮಕೃಷ್ಣ ಕಾಂಬಳೆ, ಗೃಹರಕ್ಷಕ ದಳದ ಬೋಧಕ ತಿಮ್ಮಣ್ಣ ಬದಾಮಿ, ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ, ಗಾಯಕ ಶಿವಾನಂದ ಅಮರಶೆಟ್ಟಿ, ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ ಉಪಸ್ಥಿತರಿದ್ದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಯೋಗ, ಸಂಗೀತ, ಚಿತ್ರಕಲೆ, ಜಾನಪದ ನೃತ್ಯ ಹಾಗೂ ನಾಟಕ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು. ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಬೀಸಪ್ಪ ಮತ್ತು ಸೌಖ್ಯಶ್ರೀ ಅವರನ್ನು ಹಾಗೂ ಸಾಧಕರಾದ ರಾಜಕುಮಾರ ಟಿ.ಎಲ್. ಮತ್ತು ದೇವರಾಜ ಮೇಗಲಮನಿ ಅವರನ್ನು ಗೌರವಿಸಲಾಯಿತು. ಪ್ರವೀಣ ಬಡಿಗೇರ ಸ್ವಾಗತಿಸಿದರು, ಸಂತೋಷ ಸಾಲಿಯಾನ ಕಾರ್ಯಕ್ರಮ ನಿರೂಪಿಸಿದರು, ಅಶ್ವತ ಮಲ್ಲಿಗವಾಡ ವಂದಿಸಿದರು. ವೈಶಾಲಿ, ಗೌತಮಿ ಹಾಗೂ ಯಶೋಧರಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

