
ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಿತು. ಭಕ್ತಿ ಮತ್ತು ಸೌಹಾರ್ದತೆಯ ಸಂಗಮದಂತಿದ್ದ ಈ ಜಾತ್ರಾ ಮಹೋತ್ಸವಕ್ಕೆ ನರಗುಂದ ಪತ್ರಿವನದ ಪೂಜ್ಯ ಅಜ್ಜರು ಆಗಮಿಸಿ, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿದರು. ಮಂತ್ರಘೋಷಗಳ ನಡುವೆ ನೂತನ ವಧು-ವರರಿಗೆ ಅಕ್ಷತೆ ಹಾಕಿ ಹರಸಿದ ಪೂಜ್ಯರು, ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದರು.
ಜಾತ್ರೆಯ ಅಂಗವಾಗಿ ವಿವಿಧ ಊರುಗಳಿಂದ ಆಗಮಿಸಿದ್ದ ಶ್ರೀ ಬೀರಲಿಂಗೇಶ್ವರನ ಪಲ್ಲಕ್ಕಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದವು. ಕೆರೆ ಪೂಜೆಯ ನಂತರ ಆರಂಭವಾದ ಪಲ್ಲಕ್ಕಿ ಉತ್ಸವಕ್ಕೆ ಡೊಳ್ಳಿನ ಮೇಳದವರ ಗತ್ತಿನ ಬಡಿತ ಮತ್ತು ಭಕ್ತರು ಹಾರಿಸಿದ ಭಂಡಾರವು ವಿಶೇಷ ಮೆರುಗು ನೀಡಿತು. ಗ್ರಾಮದ ತುಂಬೆಲ್ಲ ಭಂಡಾರದ ಮಳೆ ಸುರಿಸಿದ ಭಕ್ತರು ಜಯಘೋಷಗಳನ್ನು ಕೂಗುತ್ತಾ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ನಡೆದ ಡೊಳ್ಳಿನ ಪದಗಳ ಗಾಯನವು ಜನಮನ ಸೆಳೆಯಿತು.

ಈ ಕುರಿತು ಗ್ರಾಮದ ಯುವ ಮುಖಂಡ ಫಕ್ಕೀರೇಶ ಪಡೆಸೂರ ಮಾತನಾಡಿ, ಗ್ರಾಮದ ಜಾತ್ರೆಯು ಸರ್ವ ಧರ್ಮದವರನ್ನು ಒಗ್ಗೂಡಿಸುವ ಹಬ್ಬದಂತಿದೆ. ಬೇರೆ ಬೇರೆ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ಅಜ್ಜನ ದರ್ಶನ ಪಡೆದಿರುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು. ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಸಮಿತಿಯ ವತಿಯಿಂದ ಅಚ್ಚುಕಟ್ಟಾದ ಉಪಹಾರ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.

