
ಧಾರವಾಡ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದೇ ಸಮಿತಿಯ ಪ್ರಮುಖ ಆದ್ಯತೆಯಾಗಿದೆ. ಅದರಂತೆ ಗೃಹಲಕ್ಷ್ಮಿ ಯೋಜನೆಯಡಿ ಧಾರವಾಡ ತಾಲೂಕಿನ ಪ್ರತಿ ಅರ್ಹ ಮಹಿಳೆಯ ಖಾತೆಗೆ ಇದುವರೆಗೆ ತಲಾ 58,000 ರೂ.ಗಳಷ್ಟು ಹಣ ನೇರವಾಗಿ ಜಮೆಯಾಗಿದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ ತಿಳಿಸಿದರು.
ಬುಧವಾರ ಧಾರವಾಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತಿ ಮಟ್ಟದಲ್ಲಿ ನಿರಂತರ ಸಭೆಗಳನ್ನು ನಡೆಸುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಾಗುತ್ತಿದೆ. ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ತಾಂತ್ರಿಕ ಅಥವಾ ಇತರೆ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಸಮಿತಿ ಶ್ರಮಿಸುತ್ತಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಮಂಡಿಸಲಾಯಿತು. ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನ 56,943 ಫಲಾನುಭವಿಗಳಿಗೆ ಇದುವರೆಗೆ 29 ಕಂತುಗಳ ಮೂಲಕ ಒಟ್ಟು 610 ಕೋಟಿಗೂ ಅಧಿಕ ಹಣ ಸಂದಾಯವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯಡಿ 70 ನ್ಯಾಯಬೆಲೆ ಅಂಗಡಿಗಳ ಮೂಲಕ 52,526 ಪಡಿತರ ಚೀಟಿದಾರರಿಗೆ ಸುಗಮವಾಗಿ ವಿತರಣೆ ನಡೆಯುತ್ತಿದ್ದು, ಹೊಸದಾಗಿ ಸಲ್ಲಿಕೆಯಾದ 273 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ ಎಂದು ತಿಳಿಸಲಾಯಿತು.
ಇನ್ನುಳಿದಂತೆ ಗೃಹಜ್ಯೋತಿ ಯೋಜನೆಯಡಿ 52,195 ಗ್ರಾಹಕರು ಶೂನ್ಯ ದರದ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಡಿ ಮಾರ್ಚ್ 2026ರ ಅಂತ್ಯದ ವೇಳೆಗೆ 45 ಲಕ್ಷಕ್ಕೂ ಹೆಚ್ಚು ಮಹಿಳೆಯರು ಉಚಿತ ಪ್ರಯಾಣ ಬೆಳೆಸಿದ್ದು, ಇದರಿಂದ ಸಾರಿಗೆ ಸಂಸ್ಥೆಗೆ ಸುಮಾರು 7.97 ಕೋಟಿ ರೂ. ಆದಾಯ ಸಂದಾಯವಾಗಿದೆ. ಯುವನಿಧಿ ಯೋಜನೆಯಡಿ 3,898 ನಿರುದ್ಯೋಗಿ ಪದವೀಧರರಿಗೆ 8.57 ಕೋಟಿ ರೂ.ಗಳಷ್ಟು ಭತ್ಯೆ ವಿತರಿಸಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಸಮಿತಿ ಸದಸ್ಯರಾದ ಚಂದ್ರಶೇಖರ ಕದಂ, ಮಂಜುನಾಥ ಉಡಿಕೇರಿ, ಕಾರ್ತಿಕ ಗೋಕಾಕ, ಮೈಲಾರಗೌಡ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು

