ಗುಡಿಸಾಗರ್ ಶಾಲೆಯಲ್ಲಿ ನಾಲ್ಕು ದಿನಗಳ ಬೇಸಿಗೆ ಶಿಬಿರದ ಯಶಸ್ವಿ ಸಮಾರೋಪ

Spread the love

ನವಲಗುಂದ: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಸಾಗರ್ ಹಾಗೂ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಬೇಸಿಗೆ ಶಿಬಿರವು ಶುಕ್ರವಾರದಂದು ಸಂಭ್ರಮದ ಸಮಾಪ್ತಿ ಕಂಡಿತು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಈರಣ್ಣ ಗುಳೆದ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಶಾಲೆಯಲ್ಲಿ ನಿರಂತರವಾಗಿ ಇಂತಹ ಸೃಜನಶೀಲ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮಕ್ಕಳು ಶಿಬಿರದಲ್ಲಿ ಪಡೆದ ಜ್ಞಾನವನ್ನು ಕೇವಲ ನಾಲ್ಕು ದಿನಕ್ಕೆ ಸೀಮಿತಗೊಳಿಸದೆ, ಅದನ್ನು ತಮ್ಮ ದೈನಂದಿನ ಜೀವನ ಹಾಗೂ ಅಭ್ಯಾಸದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಶಿಬಿರಗಳು ಸಾರ್ಥಕತೆ ಪಡೆಯುತ್ತವೆ ಎಂದು ಅಭಿಪ್ರಾಯಪಟ್ಟರು.

​ಎಸ್‌ಡಿಎಂಸಿ ಉಪಾಧ್ಯಕ್ಷ ಫಕೀರೇಶ ಪಡೆಸುರ್ ಮಾತನಾಡಿ, ಈ ಶಿಬಿರವು ಜ್ಞಾನಾರ್ಜನೆಗೆ ಉತ್ತಮ ವೇದಿಕೆಯಾಗಿದ್ದು, ಇಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಮರೆಯಬಾರದು ಎಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಶಿಬಿರವನ್ನು ಯಶಸ್ವಿಗೊಳಿಸಿದ ಮಕ್ಕಳಿಗೆ ಎಸ್‌ಡಿಎಂಸಿ ವತಿಯಿಂದ ಪ್ರೋತ್ಸಾಹದಾಯಕವಾಗಿ ಪೆನ್ನುಗಳನ್ನು ವಿತರಿಸಲಾಯಿತು.

​ಸಹಶಿಕ್ಷಕ ಎಸ್.ಎಂ. ತಳವಾರ್ ಮಾತನಾಡಿ, ಮಕ್ಕಳ ಸರ್ವತೋಮುಖ ಏಳಿಗೆಗೆ ಸಂಸ್ಥೆಯಿಂದ ಸಿಗುತ್ತಿರುವ ಸಹಕಾರವನ್ನು ಸ್ಮರಿಸಿ ಅಭಿನಂದಿಸಿದರು. ಶಿಬಿರಾರ್ಥಿಗಳ ಪರವಾಗಿ ಸಂಜನಾ ಕುಲಕರ್ಣಿ ತನ್ನ ಅನಿಸಿಕೆ ಹಂಚಿಕೊಂಡರೆ, ಸುಧಾ ಹಿರೇಮಠ್ ನಾಲ್ಕು ದಿನಗಳ ಶಿಬಿರದ ಸಮಗ್ರ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.

​ವೇದಿಕೆಯಲ್ಲಿ ಅತಿಥಿಗಳಾಗಿ ಚಳ್ಳಪ್ಪಗೌಡ ಕಲ್ಲಿ, ಮಾರುತಿ ಪೂಜಾರ್ ಹಾಗೂ ಸಹಶಿಕ್ಷಕಿ ವಿ.ಎನ್. ಲಿಂಗರೆಡ್ಡಿ ಉಪಸ್ಥಿತರಿದ್ದರು. ಇಡೀ ಶಿಬಿರವನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಶಾಲಾ ಸುಗಮಕಾರರಾದ ಸೃಷ್ಟಿ ದೇವರಡ್ಡಿ ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿದರು. ಸುಧಾ ಹಿರೇಮಠ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾದರು.

Leave a Reply

Your email address will not be published. Required fields are marked *