ಧಾರವಾಡ: ಎಲ್‍ಪಿಜಿ, ಸಿಎನ್‍ಜಿ ಬಂಕ್‌ಗಳಲ್ಲಿ ದರ–ದಾಸ್ತಾನು ಮಾಹಿತಿ ಫಲಕ ಕಡ್ಡಾಯ; ಪಾರದರ್ಶಕತೆ, ಸಹಕಾರದಿಂದ ಸಮಸ್ಯೆ ಪರಿಹಾರ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

Spread the love

ಧಾರವಾಡ: ಏ.10: ಅನಿರೀಕ್ಷಿತ ಬೆಳವಣಿಗೆ ಹಾಗೂ ಪಾಶ್ಚಿಮಾತ್ಯ ದೇಶಗಳ ಯುದ್ಧಭೀತಿಯಿಂದ ಎಲ್‍ಪಿಜಿ, ಸಿಎನ್‍ಜಿ ಗ್ಯಾಸ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿ, ಗ್ಯಾಸ್ ಬಳಕೆದಾರರಿಗೆ ಮತ್ತು ಬಂಕ್ ಮಾಲೀಕರಿಗೆ ಅಲ್ಪ ಮಟ್ಟಿಗೆ ತೊಂದರೆ ಕಂಡು ಬಂದಿದ್ದು, ಆಟೋ ಚಾಲಕರು ಚಿಂತಿಸದೆ, ಸಮಾಧಾನವಾಗಿ ನಿರ್ವಹಿಸಬೇಕು. ಧಾರವಾಡ ಜಿಲ್ಲೆಯಲ್ಲಿ 21 ಆಟೋ ಎಲ್‍ಪಿಜಿ ಹಾಗೂ 11 ಸಿಎನ್‍ಜಿ ಬಂಕ್‍ಗಳಿವೆ. ಹಂತ ಹಂತವಾಗಿ ದಾಸ್ತಾನು ಲಭ್ಯವಾಗುತ್ತಿದ್ದು, ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಸ್ವಲ್ಪ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದ್ದು, ಆಟೋ ಚಾಲಕರು ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ನೇಹಾಲ್ ಆರ್. ಅವರು ಹೇಳಿದರು.

ಅವರು ಇಂದು (ಏ.10) ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಸೂಚನೆಯಂತೆ ಆಹಾರ ಇಲಾಖೆ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ಹಾಗೂ ಎಲ್‍ಪಿಜಿ, ಸಿಎನ್‍ಜಿ ಬಂಕ್ ಮಾಲೀಕರ, ಹುಬ್ಬಳ್ಳಿ ಧಾರವಾಡ ಆಟೋ ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು.

ಸಂಕಷ್ಟ ಸಮಯದಲ್ಲಿ ಬಂಕ್ ಮಾಲೀಕರು ಪಾರದರ್ಶಕವಾಗಿ ಗ್ಯಾಸ್ ವಿತರಿಸಬೇಕು ಮತ್ತು ಆಟೋ ಚಾಲಕರು ಸಹಕಾರ ನೀಡಬೇಕು. ಯುದ್ಧ ಸನ್ನಿಯಿಂದಾಗಿ ವಿಶೇಷವಾಗಿ ವಾಣಿಜ್ಯ ಬಳಕೆ ಗ್ಯಾಸ್ ಸರಬರಾಜು ಸ್ವಲ್ಪ ವಿಳಂಬವಾಗುತ್ತಿದೆ. ಆದರೂ ದಾಸ್ತಾನು ಬಂದಂತೆ ವಿತರಿಸಲಾಗುತ್ತಿದೆ. ಆಟೋ ಸೇರಿದಂತೆ ಎಲ್‍ಪಿಜಿ, ಸಿಎನ್‍ಜಿ ಗ್ಯಾಸ್ ಬಳಸುವ ಎಲ್ಲ ವಾಹನಗಳ ಮಾಲೀಕರು, ಚಾಲಕರು ಪರಿಸ್ಥಿತಿಗೆ ಹೊಂದಿಕೊಂಡು ಸಹಕಾರ ನೀಡಬೇಕು. ಮಾನವೀಯ ನೆಲೆಯಲ್ಲಿ ಪರಸ್ಪರ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ವಿನಂತಿಸಿದರು.

ಎಲ್‍ಪಿಜಿ, ಸಿಎನ್‍ಜಿ ಗ್ಯಾಸ್ ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ದಾಸ್ತಾನಿದೆ. ಸರಬರಾಜು ಆಧರಿಸಿ ವಿತರಿಸಲಾಗುತ್ತಿದೆ. ಯಾರು ಆತಂಕ, ಭಯ ಪಡುವ ಅಗತ್ಯವಿಲ್ಲ. ಪರಸ್ಪರ ವಿಶ್ವಾಸದಿಂದ ಮುನ್ನಡೆಯಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಸ್ಯೆ ಪರಿಹಾರಕ್ಕೆ ನಿರಂತರ ಪ್ರಯತ್ನಿಸುತ್ತಿವೆ. ಸಾರ್ವಜನಿಕರ ಸಹಕಾರವು ಮುಖ್ಯವಾಗಿದೆ ಎಂದು ಅವರು ಹೇಳಿದರು.

ದರ ದಾಸ್ತಾನು ಡ್ಸಿಪ್ಲೇ ಕಡ್ಡಾಯ: ಎಲ್‍ಪಿಜಿ, ಸಿಎನ್‍ಜಿ ಗ್ಯಾಸ್ ಬಂಕ್‍ಗಳಲ್ಲಿ ಪ್ರತಿ ದಿನದ ಗ್ಯಾಸ್ ದರ, ಬಂಕ್‍ದಲ್ಲಿನ ಗ್ಯಾಸ್ ದಾಸ್ತಾನು ಕುರಿತು ಮಾಹಿತಿ ಫಲಕ(ಡ್ಸಿಪ್ಲೇ ಬೋರ್ಡ) ವನ್ನು ಕಡ್ಡಾಯವಾಗಿ ಅಳವಡಿಸಿ, ಪ್ರದರ್ಶಿಸಬೇಕು. ಗ್ರಾಹಕರಿಗೆ ಗೊಂದಲ ಉಂಟಾಗದಂತೆ ಕ್ರಮ ವಹಿಸಬೇಕೆಂದು ಗ್ಯಾಸ್ ಬಂಕ್ ಮಾಲೀಕರಿಗೆ ಇಂದಿನ ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಯಲ್ ಆರ್.ಅವರು ಹೇಳಿದರು.

ಪ್ರತಿಯೊಂದು ಎಲ್‍ಪಿಜಿ, ಸಿಎನ್‍ಜಿ ಬಂಕ್ ಮಾಲೀಕರು ಮತ್ತು ಸಿಬ್ಬಂದಿಗಳು ಗ್ರಾಹಕರು, ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಿ, ವಿನಯದಿಂದ ಮಾತನಾಡಬೇಕು. ಜಿಲ್ಲೆಯ ಎಲ್ಲಾ ಬಂಕ್‍ಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಅವರು ಸೂಚಿಸಿದರು.

ಬಂಕ್‍ಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯ, ಗಾಳಿ ತುಂಬುವ ವ್ಯವಸ್ಥೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಬಂಕ್‍ಗಳ ಮಾಲೀಕರು ಕ್ರಮವಹಿಸಬೇಕೆಂದು ಅವರು ಹೇಳಿದರು.

ಮೇಲುಸ್ತುವಾರಿ ಸಮಿತಿ ರಚನೆ: ಜಿಲ್ಲಾಡಳಿತದಿಂದ ತೂಕ, ಅಳತೆ ಮತ್ತು ಮಾಪನ ಇಲಾಖೆಯ ಅಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು, ಗ್ಯಾಸ್ ಬಂಕ್ ಮಾಲೀಕರ ಪ್ರತಿನಿಧಿ, ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಒಂದು ಮೇಲುಸ್ತುವಾರಿ ಸಮಿತಿಯನ್ನು ರಚಿಸಿ, ಒರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.

ಮೇಲುಸ್ತುವಾರಿ ಸಮಿತಿಯ ನೋಡಲ್ ಅಧಿಕಾರಿಗಳು ಪ್ರತಿದಿನ ಗ್ಯಾಸ್ ಬಂಕ್‍ಗಳಲ್ಲಿ ಹೊಂದಿರುವ ಗ್ಯಾಸ್ ದಾಸ್ತಾನು, ಮಾರಾಟವಾದ ಗ್ಯಾಸ್ ಪ್ರಮಾಣ, ಮತ್ತು ಆಕರಿಸಿದ ದರ ಕುರಿತು ಜಿಲ್ಲಾಡಳಿತಕ್ಕೆ ವರದಿಯನ್ನು ನಿಗಧಿತ ನಮೂನೆಯಲ್ಲಿ ಸಲ್ಲಿಸಲು ಸೂಚಿಸಲಾಗುತ್ತದೆ. ಈ ಮೂಲಕ ಗ್ಯಾಸ್ ಇಂಧನ ವಿತರಣೆಯ ಮೇಲ್ವಿಚಾರಣೆ ಹಾಗೂ ದೂರುಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಿದೆ. ಸಮಿತಿಯವರು ನಿಯಮಿತವಾಗಿ ಬಂಕ್‍ಗಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.

ಎಲ್‍ಪಿಜಿ ಸಹಾಯವಾಣಿ: ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರು ಎಲ್‍ಪಿಜಿ, ಸಿಎನ್‍ಜಿ ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 1077 ಕ್ಕೆ ಕರೆ ಮಾಡಿ, ಮಾಹಿತಿ ನೀಡಬಹುದು. ಸಾರ್ವಜನಿಕರಿಂದ ಬಂದ ದೂರುಗಳನ್ನು ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಭೆಯಲ್ಲಿ ವರ್ಚುವಲ್ ಮೂಲಕ ಭಾಗಿ; ಗ್ಯಾಸ್ ವಿತರಣೆಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಲು ಸೂಚನೆ: ಪ್ರತಿಯೊಂದು ಪೆಟ್ರೋಲ್ ಬಂಕ್, ಎಲ್‍ಪಿಜಿ ಹಾಗೂ ಸಿಎನ್‍ಜಿ ಕೇಂದ್ರಗಳಲ್ಲಿ ಇಂಧನ ದರಗಳ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.

ವಿಡಿಯೋ ಸಂವಾದದ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನವೂ ಇಂಧನದ ದರಗಳಲ್ಲಿ ಆಗುವ ಬದಲಾವಣೆಗಳನ್ನು ಸ್ಪಷ್ಟವಾಗಿ, ತಮ್ಮ ಗ್ಯಾಸ್ ಬಂಕ್‍ಗಳಲ್ಲಿ ಪ್ರದರ್ಶಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಕಾಳಸಂತೆ ಮೂಲಕ ಇಂಧನ ಮಾರಾಟಕ್ಕೆ ಯಾವುದೇ ರೀತಿಯ ಅವಕಾಶ ನೀಡುವುದಿಲ್ಲ. ಹಾಗೂ ಎಲ್‍ಪಿಜಿ ಗ್ಯಾಸ್ ವಿತರಣೆಯ ಮೇಲ್ವಿಚಾರಣೆಗಾಗಿ ಧಾರವಾಡ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಜೊತೆಗೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ (ಹೆಲ್ಪ್ ಲೈನ್) ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು.

ಯುದ್ಧ ಕಾರಣದಿಂದಾಗಿ ವಾಣಿಜ್ಯ ಬಳಕೆಗಾಗಿನ ಗ್ಯಾಸ್ ವಿತರಣೆಯಲ್ಲಿ ಅಲ್ಪ ಮಟ್ಟಿಗೆ ತೊಂದರೆ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆಟೋ ಚಾಲಕರನ್ನು ಅಥವಾ ಗ್ರಾಹಕರನ್ನು ಶೋಷಣೆಗೆ ಒಳಪಡಿಸಬಾರದು. ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಮತ್ತು ಸರ್ಕಾರ ನೀಡಿರುವ ಸಲಹೆ, ಸೂಚನೆಗಳನ್ನು ಪಾಲಿಸುತ್ತೀರುವ ಬಗ್ಗೆ ಪರಿಶೀಲಿಸಿ, ಕ್ರಮವಹಿಸಬೇಕೆಂದು ಅವರು ತಿಳಿಸಿದರು.

ಇಂಧನ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ ಗ್ರಾಹಕರಿಗೆ ನ್ಯಾಯವಾದ ದರದಲ್ಲಿ ಸೇವೆ ಒದಗಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ನಿಮ್ಮ ಜೊತೆ ಇರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಎಲ್‍ಪಿಜಿ, ಸಿಎನ್‍ಜಿ ಗ್ಯಾಸ್ ಬಂಕ್‍ಗಳ ಮಾಲೀಕರು ಮತ್ತು ಹುಬ್ಬಳ್ಳಿ-ಧಾರವಾಡ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಎಲ್‍ಪಿಜಿ ಗ್ಯಾಸ್ ವಿತರಣೆಯಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರಿಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಪೊಲೀಸ್ ಇಲಾಖೆ, ಆಹಾರ ಇಲಾಖೆ, ತೂಕ, ಅಳತೆ ಮತ್ತು ಮಾಪನ ಇಲಾಖೆ ಹಾಗೂ ಎಲ್‍ಪಿಜಿ, ಸಿಎನ್‍ಜಿ ಗ್ಯಾಸ್ ಬಂಕ್‍ಗಳ ಮಾಲೀಕರು, ವ್ಯವಸ್ಥಾಪಕರು, ಹುಬ್ಬಳ್ಳಿ-ಧಾರವಾಡ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *