ಖಾಕಿಯೊಳಗಿನ ಕ್ರೌರ್ಯಕ್ಕೆ ಸಿಂಹಸ್ವಪ್ನವಾದ ‘ನ್ಯಾಯದೇವತೆ’: ಸಹೋದ್ಯೋಗಿಗಳಿಗೇ ಗಲ್ಲು ಶಿಕ್ಷೆ ಕೊಡಿಸಿದ ರೇವತಿ ಎಂಬ ಧೀಶಕ್ತಿ!

Spread the love

ಚೆನ್ನೈ: ತನ್ನವರೇ ಆದ ಒಂಬತ್ತು ಮಂದಿ ಪೊಲೀಸರ ಅಮಾನವೀಯ ಪೈಶಾಚಿಕ ಕೃತ್ಯಕ್ಕೆ ಅಂಜದೆ, ಜೀವದ ಹಂಗು ತೊರೆದು ಸತ್ಯದ ಪರವಾಗಿ ನಿಂತ ಮಹಿಳಾ ಕಾನ್ಸ್‌ಟೇಬಲ್ ರೇವತಿ ಅವರ ದಿಟ್ಟತನ ಇಂದು ದೇಶದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದಾಗಿದೆ. ತಮಿಳುನಾಡಿನ ಸಾತಂಕುಲಂನಲ್ಲಿ ನಡೆದ ತಂದೆ-ಮಗನ ಭೀಕರ ಲಾಕಪ್ ಡೆತ್ ಪ್ರಕರಣದಲ್ಲಿ ಮೃಗೀಯವಾಗಿ ವರ್ತಿಸಿದ ಖಾಕಿಧಾರಿಗಳಿಗೆ ಮರಣದಂಡನೆ ಶಿಕ್ಷೆ ಘೋಷಣೆಯಾಗುವಲ್ಲಿ ಈ ‘ಅಚಲ ಧೀಶಕ್ತಿ’ ನೀಡಿದ ಸಾಕ್ಷ್ಯವೇ ಬ್ರಹ್ಮಾಸ್ತ್ರವಾಗಿದೆ.

ಏನಿದು ಭೀಕರ ಪ್ರಕರಣ?:
2020ರ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಅಲ್ಪ ಸಮಯ ಅಂಗಡಿ ತೆರೆದಿದ್ದಾರೆ ಎಂಬ ಸಣ್ಣ ಕಾರಣಕ್ಕೆ ಜಯರಾಜ್ ಮತ್ತು ಅವರ ಪುತ್ರ ಬೆನಿಕ್ಸ್ ಅವರನ್ನು ಪೊಲೀಸರು ಬಂಧಿಸಿದ್ದರು. ಠಾಣೆಯೊಳಗೆ ರಾತ್ರಿಯಿಡೀ ಲಾಠಿಗಳಿಂದ ಮೃಗೀಯವಾಗಿ ಹಲ್ಲೆ ನಡೆಸಿ ಅಪ್ಪ-ಮಗನ ಜೀವ ಬಲಿಪಡೆದಿದ್ದ ಪೊಲೀಸರು, ಪ್ರಕರಣವನ್ನು ಮುಚ್ಚಿಹಾಕಲು ಸುಳ್ಳು ಸಾಕ್ಷ್ಯಗಳ ಸೃಷ್ಟಿಗೆ ಮುಂದಾಗಿದ್ದರು. ಇಡೀ ಠಾಣೆಯೇ ಸತ್ಯವನ್ನು ಹೂತುಹಾಕಲು ಯತ್ನಿಸಿದಾಗ, ಅದೇ ಠಾಣೆಯಲ್ಲಿದ್ದ ಕಾನ್ಸ್‌ಟೇಬಲ್ ರೇವತಿ ಅವರು ಇಲಾಖೆಯ ಕ್ರೌರ್ಯದ ವಿರುದ್ಧ ಸಿಡಿದೆದ್ದರು.

ಸಹೋದ್ಯೋಗಿಗಳ ವಿರುದ್ಧವೇ ಸಮರ:
ತನ್ನ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ತೀವ್ರ ಜೀವ ಬೆದರಿಕೆ ಹಾಗೂ ಒತ್ತಡ ಬಂದರೂ ರೇವತಿ ಅವರು ಕಿಂಚಿತ್ತೂ ಎದೆಗುಂದಲಿಲ್ಲ. ಠಾಣೆಯ ರಕ್ತಸಿಕ್ತ ಕುರುಹುಗಳು ಸಾಕ್ಷ್ಯ ನಾಶವಾಗುವ ಮೊದಲೇ ಜಪ್ತಿ ಮಾಡುವಂತೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡಿದರು. “ಅಂದು ರಾತ್ರಿ ನಡೆದದ್ದು ಕಾನೂನು ಕ್ರಮವಲ್ಲ, ಬದಲಾಗಿ ಹಸಿಹಸಿ ಕೊಲೆ” ಎಂದು ರೇವತಿ ನೀಡಿದ ದೃಢವಾದ ಪ್ರತ್ಯಕ್ಷದರ್ಶಿ ಹೇಳಿಕೆ ಇಂದು ಒಂಬತ್ತು ಮಂದಿ ಯಮಕಿಂಕರರಿಗೆ ಗಲ್ಲು ಶಿಕ್ಷೆ ಖಚಿತವಾಗುವಂತೆ ಮಾಡಿದೆ.

24 ಗಂಟೆಗಳ ಬಿಗಿ ಭದ್ರತೆ:
ನ್ಯಾಯಕ್ಕಾಗಿ ಸ್ವಂತ ಇಲಾಖೆಯನ್ನೇ ಎದುರು ಹಾಕಿಕೊಂಡ ರೇವತಿ ಅವರ ಪ್ರಾಣಕ್ಕೆ ಈಗ ಅಪಾಯವಿರುವುದು ಸಹಜ. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಅವರಿಗೆ ದಿನದ 24 ಗಂಟೆಯೂ ಭಾರಿ ಭದ್ರತೆ ನೀಡಲು ಸೂಚಿಸಿದೆ. ಸಮಾಜಕ್ಕೆ ಮಾದರಿಯಾಗಿ ನಿಂತ ಈ ಧೀಮಂತ ಮಹಿಳೆಗೆ ಕುಟುಂಬದೊಂದಿಗೆ ಕಳೆಯಲು ಒಂದು ತಿಂಗಳ ರಜೆಯನ್ನೂ ಮಂಜೂರು ಮಾಡಲಾಗಿದೆ. ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸಲು ಧೈರ್ಯ ಬೇಕು ಎಂಬುದನ್ನು ರೇವತಿ ಅವರು ಜಗತ್ತಿಗೆ ಸಾರಿದ್ದಾರೆ.

Leave a Reply

Your email address will not be published. Required fields are marked *