

ಧಾರವಾಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ 2025-26 ನೇ ಸಾಲಿನ ‘ಮಹಿಳಾ ವೇದಿಕೆ-ನಕ್ಷತ್ರ’ ವತಿಯಿಂದ ಉದ್ಘಾಟನಾ ಸಮಾರಂಭ ಹಾಗೂ “ಕಾನೂನು ಅರಿವು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.
ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕರಾದ ಡಾ. ಜ್ಯೋತಿರ್ಲಿಂಗ ಚಂದ್ರಮ ಹೊನಕಟ್ಟಿ ಅವರು, ಜಾನಪದದ ಸೊಗಡಿನ ಮೂಲಕ ಮಹಿಳೆಯರನ್ನು ಭಾವನಾತ್ಮಕವಾಗಿ ತಲುಪಿದರು. “ತವರೂರ ದಾರಿಯಲ್ಲಿ ಕಲ್ಲಿಲ್ಲ ಮುಳ್ಳಿಲ್ಲ, ಸಾಸಿವೆಯಷ್ಟು ಮರಳಿಲ್ಲ” ಎಂಬ ಜಾನಪದ ಹಾಡಿನೊಂದಿಗೆ ಮಾತು ಆರಂಭಿಸಿದ ಅವರು, “ಮರಿಬ್ಯಾಡ ತಂಗಿ ನಿನ್ನ ತವರೂರ ಹೋಗಾಗ ಹಾಕಬ್ಯಾಡ ಕಣ್ಣೀರ, ತಾಳಿ ನಿನಗ ಕಟ್ಯಾರ ನೀ ತಾಳಿಕೊಂಡು ಬಾಳು ಅಂತ ಹೇಳ್ಯಾರ, ಗಂಡನ ನಿನಗ ದೇವರ” ಎಂಬ ಸಾಲುಗಳ ಮಹತ್ವ ವಿವರಿಸಿದರು. ಮದುವೆಯಾದ ಮಹಿಳೆಯು ಗಂಡನ ಮನೆಯಲ್ಲಿ ಹೊಂದಿಕೊಂಡು, ತಾಳಿಕೊಂಡು ಬಾಳುವುದೇ ನಿಜವಾದ ಸಂಸ್ಕಾರ. ಇಂದು ಎರಡು ತಿಂಗಳಿಗೆ ವಿಚ್ಛೇದನ ಪಡೆಯುವ ಸಮಾಜದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮರೆತು ಬಿಟ್ಟಿದ್ದೇವೆ. ಜಾನಪದ ಹಾಡುಗಳಲ್ಲಿ ಅಡಗಿರುವ ಈ ಸಂಸ್ಕಾರ-ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಪೊಲೀಸ್ ಠಾಣೆ ಅಥವಾ ಕೋರ್ಟ್ಗಳ ಅವಶ್ಯಕತೆ ಇರುವುದಿಲ್ಲ ಎಂದರು. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಈ ವ್ಯಸ್ತ ಜೀವನದಲ್ಲಿ ಜನಪದ ಮತ್ತು ಸಂಸ್ಕೃತಿಯ ಕಡೆಗೆ ಜನರು ಆಸಕ್ತಿ ಕಡಿಮೆ ತೋರಿಸುತ್ತಿದ್ದು, ಕನ್ನಡ ಭಾಷೆಗೆ ಆದ್ಯತೆ ಕೊಟ್ಟು, ಕನ್ನಡ ಮಾತನಾಡಿ ಎಂದು ಹಲವು ಜಾನಪದ ಗೀತೆಗಳ ಮೂಲಕ ನೆರೆದವರನ್ನು ಸಂತೋಷಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಶ್ರೀಮತಿ ಪ್ರಭಾವತಿ ದೇಸಾಯಿ ಅವರು, ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿಗೂ ಜಗತ್ತಿನಲ್ಲಿ ‘ನಿರ್ಭಯ’ದಂತಹ ಭಯಾನಕ ಕೃತ್ಯಗಳು ಹೆಚ್ಚಾಗುತ್ತಿವೆ. ನಾವು ಪ್ರಶ್ನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಶೋಷಣೆಯನ್ನು ಪ್ರತಿಭಟಿಸಬೇಕು. ಬಾಲ್ಯ ವಿವಾಹ ಕಾಯ್ದೆ, ಲೈಂಗಿಕ ಕಿರುಕುಳ, ಕೌಟುಂಬಿಕ ಕಿರುಕುಳ ಹಾಗೂ ಪೋಕ್ಸೋ (POCSO) ಕಾನೂನುಗಳ ಬಗ್ಗೆ ಅವರು ವಿದ್ಯಾರ್ಥಿನಿಯರಿಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಜಿ.ಕೆ. ಬಡಿಗೇರ್ ಅವರು, ಡಾ. ಹೊನಕಟ್ಟಿ ಅವರ ಮಾತಿನಂತೆ, ನಮ್ಮ ಬದುಕಿಗೆ ಸಂಸ್ಕಾರ ಮುಖ್ಯ. ಜನಪದವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೂಲಭೂತ ಕಾನೂನು ಮತ್ತು ಹಕ್ಕುಗಳ ಬಗ್ಗೆ ತಿಳಿದು, ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಜ್ಯೋತಿ ಕಾಡದೇವರಮಠ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ವೇದಿಕೆಯ ಸಂಚಾಲಕರಾದ ಡಾ. ರಾಜೇಶ್ವರಿ ಹೊರಕೇರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಸುಜಾತ ಮೂಕನ ಗೌಡರ್ ಹಾಗೂ ಅಫ್ರಿನ್ ಮೆಣಸಿನಕಾಯಿ ಅವರು ಅತಿಥಿಗಳ ಪರಿಚಯ ಮಾಡಿದರು. ಶ್ರೀಮತಿ ದಿವ್ಯಾ.ಡಿ. ಪರಾಂಡೆ ಅವರು ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿಸಿದರು. ಡಾ. ಬಸವರಾಜೇಶ್ವರಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಶ್ರೀಮತಿ ಮಂಜುಳಾ ಪಾಟೀಲ್ ಅವರು ವಂದಿಸಿದರು. ಈ ವೇದಿಕೆಯಲ್ಲಿ IQAC ಸಂಚಾಲಕರಾದ ಶ್ರೀ ಇಬ್ರಾಹಿಂ ಸೌದಾಗರ್ ಹಾಗೂ ಸಹ ಸಂಚಾಲಕರಾದ ಡಾ. ಬಸವರಾಜೇಶ್ವರಿ ಪಾಟೀಲ್ ಅವರು ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

