
ಬೆಳಗಾವಿ: ಸುವರ್ಣಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಮಂಗಳವಾರದಂದು (ಡಿ.09) ಜಗತ್ತಿನ ಎರಡನೇ ಅತಿದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧ್ವಜವನ್ನು ನೀಡಿ ಕೊಡುಗೆ ನೀಡಿದ ಕಲಬುರಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರ ಕುಟುಂಬಸ್ಥರಿಗೆ ಮತ್ತು ಈ ಕಾರ್ಯಕ್ರಮಕ್ಕೆ ಕಾರಣರಾದ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ತ್ರಿವರ್ಣ ಧ್ವಜದ ಮಹತ್ವ
ತ್ರಿವರ್ಣ ಧ್ವಜವು ಕೇವಲ ಖಾದಿ ವಸ್ತ್ರವಲ್ಲ, ಅದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು. ಧ್ವಜದ ಬಣ್ಣಗಳ ಮಹತ್ವವನ್ನು ವಿವರಿಸಿದ ಅವರು, “ಕೇಸರಿ ಬಣ್ಣವು ಶಕ್ತಿ, ಸ್ಥೈರ್ಯ ಹಾಗೂ ತ್ಯಾಗವನ್ನು ಪ್ರತಿಬಿಂಬಿಸುತ್ತದೆ. ಬಿಳಿಬಣ್ಣ ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸಿದರೆ, ಹಸಿರು ಸಮೃದ್ಧಿಯನ್ನು ಬಿಂಬಿಸುತ್ತದೆ. ಅಶೋಕ ಚಕ್ರವು ನಿರಂತರವಾಗಿ ದೇಶದ ಆರ್ಥಿಕತೆಯನ್ನು ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದರ ಸಂಕೇತವಾಗಿದೆ,” ಎಂದು ಹೇಳಿದರು.
ಪ್ರತಿಯೊಬ್ಬರೂ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಗೌರವಿಸಿ, ಹೆಮ್ಮೆಯಿಂದ ಕಾಣಬೇಕು. ರಾಷ್ಟ್ರಕ್ಕಾಗಿ ತ್ಯಾಗ-ಬಲಿದಾನ ಮಾಡಿದವರನ್ನು ಸ್ಮರಿಸುವುದು ಅಗತ್ಯ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಗಾಂಧೀಜಿ ನೂರನೇ ವರ್ಷಾಚರಣೆ ಸ್ಮರಣೆ
ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರವನ್ನು ಸ್ಮರಿಸಿದ ಸಿದ್ದರಾಮಯ್ಯನವರು, ಬೆಳಗಾವಿಯಲ್ಲಿ ಗಾಂಧೀಜಿಯವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ನೂರು ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಸುವರ್ಣಸೌಧದ ಪಕ್ಕದಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ನೆನಪಿಸಿದರು.
ಜಾತ್ಯತೀತ ಮತ್ತು ಸಮಸಮಾಜದ ನಿರ್ಮಾಣಕ್ಕೆ ಕರೆ
ದೇಶದಲ್ಲಿ ಅನೇಕ ಜಾತಿ, ಧರ್ಮಗಳಿದ್ದು, ನಾವೆಲ್ಲರೂ ಜಾತ್ಯತೀತರು ಆಗಬೇಕಾದ ಅವಶ್ಯಕತೆಯಿದೆ ಎಂದು ಸಿಎಂ ಪ್ರತಿಪಾದಿಸಿದರು. “ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದು, ಭ್ರಾತೃತ್ವ, ದೇಶಪ್ರೇಮ ಮತ್ತು ಮನುಷ್ಯ ಸಮಾಜವನ್ನು ಎಷ್ಟು ಮಟ್ಟಿಗೆ ಸಾಧಿಸಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಮನೋಭಾವವು ಎಲ್ಲಾ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಬೆಳೆಯಬೇಕು ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ಇದೇ ಕಾರಣಕ್ಕಾಗಿ ಇಂತಹ ಐತಿಹಾಸಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು

