
ಕೊಪ್ಪಳ: ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಹನುಮನ ದರ್ಶನ ಪಡೆಯಲು ಭಕ್ತಿಯಿಂದ ಹೊರಟಿದ್ದ ಧಾರವಾಡ ಮೂಲದ ಹತ್ತು ಮಂದಿ ಭಕ್ತರ ಪಯಣ ಅರ್ಧ ದಾರಿಯಲ್ಲೇ ದುರಂತದಲ್ಲಿ ಅಂತ್ಯಗೊಂಡಿದೆ. ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕ್ರೂಷರ್ ವಾಹನದ ಟೈರ್ ಏಕಾಏಕಿ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ, ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಧಾರವಾಡದಿಂದ ಕ್ರೂಷರ್ ವಾಹನದಲ್ಲಿ ಸಂಭ್ರಮದಿಂದಲೇ ಹೊರಟಿದ್ದ ಭಕ್ತರು ಹರಟೆ ಹೊಡೆಯುತ್ತಾ ಇನ್ನೇನು ಅಂಜನಾದ್ರಿ ತಲುಪಲು ಕೆಲವೇ ಮೈಲುಗಳ ದೂರ ಬಾಕಿ ಇದ್ದಾಗ ಈ ದುರ್ಘಟನೆ ಸಂಭವಿಸಿದೆ. ಸುಡು ಬಿಸಿಲಿನಲ್ಲಿ ವೇಗವಾಗಿ ಚಲಿಸುತ್ತಿದ್ದ ವಾಹನದ ಟೈರ್ ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆಯ ಮಧ್ಯದಲ್ಲೇ ಪಲ್ಟಿಯಾಗಿದೆ. ಕ್ಷಣಾರ್ಧದಲ್ಲಿ ನಡೆದ ಈ ಅಪಘಾತದಿಂದಾಗಿ ವಾಹನದಲ್ಲಿದ್ದವರು ದಿಕ್ಕಾಪಾಲಾಗಿ ಬಿದ್ದಿದ್ದು, ಪ್ರಯಾಣಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಇತರ ಏಳು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೊಪ್ಪಳ ಗ್ರಾಮೀಣ ಪೊಲೀಸರು, ಗಾಯಾಳುಗಳನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಹನುಮನ ದರ್ಶನ ಪಡೆಯಬೇಕೆಂಬ ಹಂಬಲದಲ್ಲಿದ್ದ ಭಕ್ತರ ಆಸೆ ಅರ್ಧದಾರಿಯಲ್ಲೇ ಕಮರಿ ಹೋಗಿದ್ದು, ಮೃತರ ಕುಟುಂಬದವರ ಆಕ್ರಂದನ ಮನ ಕಲಕುವಂತಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

