
ಬೆಳಗಾವಿ: ಸರ್ಕಾರದ ನಿಯಮಗಳನ್ನು ಪಾಲಿಸಬೇಕಾದ ಅಧಿಕಾರಿಯೇ ಲಂಚದ ಆಸೆಗೆ ಬಿದ್ದು ಲೋಕಾಯುಕ್ತ ಬಲೆಗೆ ಬಿದ್ದಿರುವ ನಾಚಿಕೆಗೇಡಿನ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಜಪ್ತಿ ಮಾಡಲಾಗಿದ್ದ ಮರಳನ್ನು ವಿಲೇವಾರಿ ಮಾಡಲು ಗುತ್ತಿಗೆದಾರನಿಂದ ₹15,000 ಲಂಚ ಪಡೆಯುತ್ತಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಫಯಾಜ್ ಅಹ್ಮದ್ ಶೇಖ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಿದ್ದಾರೆ.
ಘಟನೆಯ ವಿವರ:
ಶೀತಲ ಸನದಿ ಎಂಬುವವರು ತಮ್ಮ ಮರಳು ಸಾಗಾಟದ ಕೆಲಸಕ್ಕೆ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರ ಬೆಲೆ ನಿಗದಿ ಮಾಡಿ ಮರಳು ವಿಲೇವಾರಿ ಆದೇಶ ನೀಡಲು ಅಧಿಕಾರಿ ಫಯಾಜ್ ಅಹ್ಮದ್ ಶೇಖ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚದ ಹಣವನ್ನು ಪಡೆಯುತ್ತಿದ್ದಾಗಲೇ ಅಧಿಕಾರಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.
ಸರಕಾರಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಯಾವಾಗ?
ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು, ಜನರ ಕೆಲಸಗಳನ್ನು ಸುಗಮವಾಗಿ ಮಾಡಿಕೊಡಬೇಕಾದ್ದು ಅವರ ಕರ್ತವ್ಯ. ಆದರೆ, ಕೆಲ ಅಧಿಕಾರಿಗಳು ಇದನ್ನೇ ಹಣ ಗಳಿಕೆಯ ಮಾರ್ಗವನ್ನಾಗಿ ಮಾಡಿಕೊಂಡಿರುವುದು ವ್ಯವಸ್ಥೆಯ ದುರಂತ. ಇಂತಹ ಭ್ರಷ್ಟಾಚಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಸರ್ಕಾರದ ಆಶಯಗಳಿಗೆ ಬೆಲೆ ಸಿಗುತ್ತದೆ. ಈ ಪ್ರಕರಣವು ಸರ್ಕಾರದ ಇತರ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು. ಸಾರ್ವಜನಿಕರು ಕೂಡ ಭ್ರಷ್ಟಾಚಾರಕ್ಕೆ ಬಲಿಯಾಗದೆ, ಇಂತಹ ಕೃತ್ಯಗಳನ್ನು ಧೈರ್ಯವಾಗಿ ವರದಿ ಮಾಡಬೇಕು. ಈ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.

