ಸಂಗೀತ ಲೋಕದ ಧ್ರುವತಾರೆ ಅಸ್ತಂಗತ: ಖ್ಯಾತ ಗಾಯಕ ಅಶೋಕ ಹುಗ್ಗಣ್ಣವರ ವಿಧಿವಶ

Spread the love

ಹುಬ್ಬಳ್ಳಿ: ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಪ್ರತಿಭೆ, ಗ್ವಾಲಿಯರ್ ಘರಾನಾದ ಗಾಯನ ಶೈಲಿಯಿಂದ ಮನೆಮಾತಾಗಿದ್ದ ನಿವೃತ್ತ ಸಂಗೀತ ಪ್ರಾಧ್ಯಾಪಕ ಅಶೋಕ ಹುಗ್ಗಣ್ಣವರ (64) ಅವರು ಬುಧವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೂಲತಃ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದವರಾದ ಇವರು, ಹೊನ್ನಾವರದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನಲ್ಲಿ ದೀರ್ಘಕಾಲ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2021ರಲ್ಲಿ ನಿವೃತ್ತಿ ಹೊಂದಿದ್ದರು.
ನಿವೃತ್ತಿಯ ಬಳಿಕ ಹುಬ್ಬಳ್ಳಿಯ ಉಣಕಲ್‌ನಲ್ಲಿ ನೆಲೆಸಿದ್ದ ಅಶೋಕ ಹುಗ್ಗಣ್ಣವರ ಅವರು, ಇಡೀ ಬದುಕನ್ನು ಸಂಗೀತ ಸಾದನೆ ಹಾಗೂ ಬೋಧನೆಗೆ ಮುಡಿಪಾಗಿಟ್ಟಿದ್ದರು. ಸೌಮ್ಯ ಸ್ವಭಾವದ, ಶಿಸ್ತುಬದ್ಧ ಜೀವನ ನಡೆಸಿದ ಅವರ ನಿಧನವು ಉತ್ತರ ಕರ್ನಾಟಕದ ಸಾಂಸ್ಕೃತಿಕ ವಲಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ಅತೀವ ಪ್ರತಿಭಾವಂತರಾಗಿದ್ದ ಹುಗ್ಗಣ್ಣವರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ ಪದವಿ ಪಡೆದಿದ್ದರು. ಸಂಗೀತದ ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದ ಅವರು ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನೂ, ಸಂಗೀತ ರತ್ನ ಡಿಪ್ಲೊಮಾವನ್ನೂ ಪೂರೈಸಿದ್ದರು.

ಗ್ವಾಲಿಯರ್ ಘರಾನಾ ಶೈಲಿಯ ಖ್ಯಾತ ವಿದ್ವಾಂಸ ಪಂ. ಲಿಂಗರಾಜ ಬುವಾ ಯರಗುಪ್ಪಿ ಅವರ ಬಳಿ ಸತತ 12 ವರ್ಷಗಳ ಕಾಲ ಕಠಿಣ ಸಂಗೀತ ಅಭ್ಯಾಸ ಮಾಡಿದ ಅಶೋಕ ಹುಗ್ಗಣ್ಣವರ ಅವರು, ಗಾಯನದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಕುಂದಗೋಳದ ನಾಡಿಗೇರ ಮನೆತನದ ಸಂಗೀತ ಪರಂಪರೆಯ ಮೇಲೆ ಅಪಾರ ಗೌರವ ಹೊಂದಿದ್ದ ಅವರು, ಪ್ರತಿವರ್ಷ ಅಲ್ಲಿನ ವಾಡೆಯಲ್ಲಿ ನಡೆಯುವ ಪ್ರಸಿದ್ಧ ಅಹೋರಾತ್ರಿ ಸಂಗೀತೋತ್ಸವಕ್ಕೆ ತಪ್ಪದೇ ಹಾಜರಾಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದ ನಡುವೆಯೂ ಸಂಗೀತೋತ್ಸವದ ಒಡನಾಟವನ್ನು ಮುಂದುವರಿಸಿಕೊಂಡಿದ್ದ ಅವರ ಅನುಪಸ್ಥಿತಿ ಇದೀಗ ಸಂಗೀತ ಪ್ರೇಮಿಗಳಲ್ಲಿ ತೀವ್ರ ನೋವು ಮೂಡಿಸಿದೆ.
ಅವರ ಸಾಹಿತ್ಯ ಹಾಗೂ ಸಂಗೀತ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅನನ್ಯ ಮನ್ಸೂರ್ ಪ್ರಶಸ್ತಿ, ರಾಗಶ್ರೀ ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಅವರು ಮೌಲ್ಯಯುತ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಶಿಕ್ಷಕಿ ವೀಣಾ, ಹಾಗೂ ಪುತ್ರ, ವಿಜ್ಞಾನಿ ಮತ್ತು ಗಾಯಕರೂ ಆಗಿರುವ ವಿನಾಯಕ, ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶುಕ್ರವಾರ ಬೆಳಿಗ್ಗೆ 11.30ಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *