ಕಬ್ಬು ಬೆಲೆ ಬಿಕ್ಕಟ್ಟು: ‘ಎಫ್.ಆರ್.ಪಿ. ನಿಗದಿ ಕೇಂದ್ರದ ಹೊಣೆ’ – ಸಮಸ್ಯೆ ಪರಿಹರಿಸಲು ಪ್ರಧಾನಿ ಭೇಟಿಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ

Spread the love

ಬೆಂಗಳೂರು: ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಉದ್ಭವಿಸಿರುವ ಕಬ್ಬು ಬೆಳೆಗಾರರ ಬಿಕ್ಕಟ್ಟಿಗೆ ಕೇಂದ್ರದ ನೀತಿಗಳೇ ಮೂಲ ಕಾರಣವೆಂದು ಸ್ಪಷ್ಟವಾಗಿ ಘೋಷಿಸಿದರು. ರೈತರ ಉತ್ಪನ್ನಕ್ಕೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್.ಆರ್.ಪಿ) ನಿರ್ಧರಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರವಾಗಿದೆ. ಆದ್ದರಿಂದ, ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ರಾಜ್ಯದ ಬಿ.ಜೆ.ಪಿ ನಾಯಕರ ಮರಳು ಮಾತುಗಳಿಗೆ ಬಲಿಯಾಗಬಾರದು ಎಂದು ಅವರು ಮನವಿ ಮಾಡಿದರು. ಸಂಬಂಧಪಟ್ಟ ಸಚಿವರಾದ ಪ್ರಹ್ಲಾದ್ ಜೋಶಿಯವರು ಏಕೆ ರೈತರ ಪ್ರತಿಭಟನಾ ಸಭೆಗೆ ಹೋಗಿಲ್ಲ ಎಂದು ಪ್ರಶ್ನಿಸಿದ ಅವರು, ಸಕ್ಕರೆ ರಫ್ತು ನಿಯಮದಲ್ಲಿ ಕೇಂದ್ರದ ನೀತಿ ಮತ್ತು ಎಫ್.ಆರ್.ಪಿ ನಿಗದಿಯಲ್ಲಿ ಕೇಂದ್ರದ ತೀರ್ಮಾನದಿಂದ ಆಗಿರುವ ಅನಾಹುತದ ಕುರಿತು ಪ್ರಧಾನಿ ಜೊತೆ ಚರ್ಚಿಸಲು ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

​ಕಳೆದ ಕೆಲವು ದಿನಗಳಿಂದ ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ನನಗೆ ಸ್ಪಷ್ಟ ಮಾಹಿತಿ ಇದೆ ಎಂದು ಹೇಳಿದ ಸಿಎಂ, ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಆಯುಕ್ತರಿಗೆ ಸೂಚನೆಗಳನ್ನು ನೀಡಿ ರೈತರು ಹಾಗೂ ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸುವಂತೆ ಸೂಚಿಸಲಾಗಿತ್ತು ಎಂದರು. ಅದರಂತೆ ಅಧಿಕಾರಿಗಳು ಚರ್ಚೆ ನಡೆಸಿದ್ದು, ಬೆಳಗಾವಿ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿ ಶೇ. 11.25 ರಿಕವರಿ ಬಂದರೆ 3,200 ರೂ. ಹಾಗೂ ಶೇ. 10.25 ರಿಕವರಿ ಬಂದರೆ 3,100 ರೂ. ಗಳನ್ನು (ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ) ಪಾವತಿಸುವಂತೆ ಕಾರ್ಖಾನೆಗಳ ಮಾಲೀಕರಿಗೆ ಮನವೊಲಿಸಿದ್ದಾರೆ. ಹಾಗೆಯೇ, ರೈತರಿಗೂ ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೆ, ವಿರೋಧ ಪಕ್ಷಗಳವರು ಈ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವುದರಿಂದ ವಿಷಯ ತುಸು ಗೊಂದಲಕರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

​ಕಬ್ಬು ಮತ್ತು ಸಕ್ಕರೆ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಅತ್ಯಂತ ನಗಣ್ಯವಾಗಿದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಎಫ್.ಆರ್.ಪಿ.ಯನ್ನು ನಿಗದಿಪಡಿಸುತ್ತದೆ ಮತ್ತು ಈ ದರ ರೈತರಿಗೆ ಲಭಿಸುತ್ತಿದೆಯೇ ಎಂದು ನೋಡಿಕೊಳ್ಳುವುದು, ಹಾಗೂ ರೈತರಿಗೆ ತೂಕ, ಬೆಲೆ, ಮತ್ತು ನಿಗದಿತ ಅವಧಿಯಲ್ಲಿ ಪಾವತಿ ಇತ್ಯಾದಿಗಳನ್ನು ನೋಡಿಕೊಳ್ಳುವುದು ಮಾತ್ರ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ವಿವರಿಸಿದರು. ಎಫ್.ಆರ್.ಪಿ. ನಿಗದಿಪಡಿಸುವುದಷ್ಟೇ ಅಲ್ಲದೆ, ಸಕ್ಕರೆ ಮೇಲಿನ ನಿಯಂತ್ರಣವನ್ನು ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರವೇ ಹೊಂದಿರುತ್ತದೆ. 2022-23 ರಿಂದ ಈಚೆಗೆ ಎಫ್.ಆರ್.ಪಿ.ಯನ್ನು ಶೇ. 10.25 ಕ್ಕೆ ಏರಿಕೆ ಮಾಡಲಾಗಿದ್ದು, ಈ ವಿಚಾರದಲ್ಲೂ ನಮ್ಮ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಜೊತೆಗೆ, ಸಕ್ಕರೆಗೆ 2019ರಲ್ಲಿ ಕಡೆಯದಾಗಿ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ಯನ್ನು ಪ್ರತಿ ಕೆ.ಜಿ. ಗೆ 31 ರೂ. ನಿಗದಿ ಮಾಡಿ ಆನಂತರ ಪರಿಷ್ಕರಿಸದಿರುವುದು, ಮತ್ತು ಕಳೆದ ಕೆಲವು ವರ್ಷಗಳಿಂದಲೂ ಕೇಂದ್ರ ಸರ್ಕಾರವು ಸಕ್ಕರೆ ರಫ್ತನ್ನು ನಿಲ್ಲಿಸಿ, ಕಳೆದ ವರ್ಷ ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಮಾತ್ರ ಅವಕಾಶ ನೀಡಿದ್ದು (ಕರ್ನಾಟಕವೊಂದರಲ್ಲೆ 41 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದ್ದರೂ), ಈ ಕಾರಣದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು. ಎಥನಾಲ್ ವಿಚಾರದಲ್ಲೂ ಸಹ ಕೇಂದ್ರ ಸರ್ಕಾರವು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ. ಕರ್ನಾಟಕದಲ್ಲಿ 270 ಕೋಟಿ ಲೀಟರ್‌ ಉತ್ಪಾದನಾ ಸಾಮರ್ಥ್ಯ ಇದ್ದರೂ ಸಹ 2024-25 ರಲ್ಲಿ 47 ಕೋಟಿ ಲೀಟರ್‌ಗಳನ್ನು ಮಾತ್ರ ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಮಾಡಲಾಗಿದೆ. ಇದು ಕೇಂದ್ರ ಸರ್ಕಾರವು ರಾಜ್ಯದ ರೈತರ ಬದುಕಿನೊಂದಿಗೆ ಆಡುತ್ತಿರುವ ಚೆಲ್ಲಾಟಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಟೀಕಿಸಿದರು.

​ತೂಕದಲ್ಲಿನ ಮೋಸವನ್ನು ತಡೆಗಟ್ಟಲು ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲೂ ಡಿಜಿಟಲ್ ತೂಕ ಯಂತ್ರವನ್ನು ಅಳವಡಿಸಿದೆ ಮತ್ತು ಸರ್ಕಾರದ ವತಿಯಿಂದಲೇ 11 ಜಾಗಗಳಲ್ಲಿ ಡಿಜಿಟಲ್ ತೂಕ ಯಂತ್ರಗಳನ್ನು ಅಳವಡಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ ಎಂದು ಸಿಎಂ ಹೇಳಿದರು. ಇದರ ಜೊತೆಗೆ ತೂಕ, ಇಳುವರಿ, ಕಟಾವು ಮತ್ತು ಬಿಲ್ ಪಾವತಿಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಸಮಿತಿಗಳನ್ನು ರಚಿಸಲಾಗಿದೆ. 2024-25 ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು 522 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದಿದ್ದು, ಎಫ್.ಆರ್.ಪಿ. ದರದಂತೆ 18,221.88 ಕೋಟಿ ರೂ. ಪಾವತಿಸಬೇಕಿತ್ತು. ಆದರೆ, ಕೆಲವು ಕಡೆ ರಿಕವರಿ ಹೆಚ್ಚು ಬಂದ ಕಾರಣ 19,569.15 ಕೊಟಿ ರೂ. ಗಳನ್ನು ರೈತರಿಗೆ ಪಾವತಿಸುವಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಇಷ್ಟೆಲ್ಲಾ ಮಾಡಿದ್ದರೂ ಸಹ, ರೈತರ ಮುಗ್ಧತೆಯನ್ನು ವಿರೋಧ ಪಕ್ಷದವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪುನರುಚ್ಚರಿಸಿದರು.

​ಸರ್ಕಾರವು ಸಂವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದು, ನಾಳೆ ಬೆಳಿಗ್ಗೆ 11.00 ಗಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರುಗಳ ಜೊತೆ ಹಾಗೂ ಮಧ್ಯಾಹ್ನ 1.00 ಗಂಟೆಗೆ ರೈತ ಮುಖಂಡರುಗಳ ಜೊತೆ ಚರ್ಚಿಸಲು ಸಭೆ ಕರೆದಿದ್ದೇವೆ. ಸದರಿ ಸಭೆಯಲ್ಲಿ ಎರಡೂ ಕಡೆಯ ಅಹವಾಲುಗಳನ್ನು ಆಲಿಸಿ ರಾಜ್ಯ ಸರ್ಕಾರವು ತನ್ನ ಮಿತಿಯಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ. ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ತುರ್ತಾಗಿ ಅವಕಾಶ ನೀಡಬೇಕೆಂದು ಪತ್ರ ಬರೆಯಲು ಹಾಗೂ ಪ್ರಧಾನಮಂತ್ರಿಗಳ ಕಛೇರಿಯನ್ನು ಸಂಪರ್ಕಿಸಲು ತೀರ್ಮಾನಿಸಲಾಗಿದೆ. ಕೂಡಲೇ ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ಮುಖ್ಯವಾಗಿ ರಿಕವರಿ ಪ್ರಮಾಣವನ್ನು ಇಳಿಸುವುದು, ಎಫ್.ಆರ್.ಪಿ. ದರ ಪರಿಷ್ಕರಿಸುವುದು, ಸಕ್ಕರೆ ರಫ್ತು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಒತ್ತಾಯಿಸಲಾಗುವುದು. ಮಹಾರಾಷ್ಟ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಲ್ಲಿ 2,515 ರೂ. ರಿಂದ 3,635 ರೂ. ಗಳವರೆಗೆ ಕಬ್ಬಿಗೆ ಬೆಲೆಗಳನ್ನು ನೀಡುತ್ತಿರುವ ವಿಚಾರವನ್ನು ಸಹ ನಾಳಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ರಾಜ್ಯದ ಕಬ್ಬು ಬೆಳೆಯುವ ರೈತರು ಸರ್ಕಾರದ ಮೇಲೆ ವಿಶ್ವಾಸವಿಡಬೇಕೆಂದು ಹಾಗೂ ವಿರೋಧ ಪಕ್ಷಗಳ ರಾಜಕಾರಣಕ್ಕೆ ಬಲಿಯಾಗಬಾರದೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು

Leave a Reply

Your email address will not be published. Required fields are marked *