
ಧಾರವಾಡ: ಪೋಷಣ ಅಭಿಯಾನವು ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿಯುತ ಕಾರ್ಯಕ್ರಮವಾಗಿದ್ದು, ಇದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಭುವನೇಶ ಪಾಟೀಲ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ 8ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಧಾನ್ಯ ಮತ್ತು ಹಸಿರು ಸೊಪ್ಪಿನ ಮಹತ್ವ
“ಶಿಶುಗಳಿಗೆ ಮೊದಲ ಆರು ತಿಂಗಳು ತಾಯಿ ಹಾಲೇ ಅತ್ಯುತ್ತಮ ಆಹಾರ. ಅದರ ನಂತರ ದ್ರವರೂಪದ ಪೌಷ್ಟಿಕ ಆಹಾರ ನೀಡಬೇಕು. ಸಿರಿಧಾನ್ಯ, ಹಸಿರು ಸೊಪ್ಪು ಮತ್ತು ಹಣ್ಣುಗಳನ್ನು ಮಕ್ಕಳ ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸಬಹುದು” ಎಂದು ಸಿಇಓ ಭುವನೇಶ ಪಾಟೀಲ ತಿಳಿಸಿದರು. ಜೊತೆಗೆ, ಪೋಷಣ ಅಭಿಯಾನ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಎಲ್ಲ ಮಕ್ಕಳಿಗೂ ತಾಯಿ ಹಾಲು ಹಾಗೂ ಎಲ್ಲ ಗರ್ಭಿಣಿಯರಿಗೂ ಪೌಷ್ಟಿಕ ಆಹಾರ ದೊರಕುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ನಮ್ಮ ಹಿರಿಯರು ಆರೋಗ್ಯವಂತರಾಗಿದ್ದದ್ದು ಸಹಜ ಮತ್ತು ಪ್ರಕೃತಿಯ ಆಹಾರ ಸೇವನೆಯಿಂದಾಗಿದ್ದು, ಇದರ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಪೌಷ್ಟಿಕ ಆಹಾರದಿಂದ ದೈಹಿಕ ಬೆಳವಣಿಗೆ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಮಾತನಾಡಿ, ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಗರ್ಭಿಣಿಯರು, ಶಿಶುಗಳು ಮತ್ತು ಹದಿಹರೆಯದ ಮಕ್ಕಳಿಗೆ ಸಮತೋಲಿತ ಆಹಾರ ಅತ್ಯಂತ ಅಗತ್ಯ ಎಂದು ತಿಳಿಸಿದರು.
ಅನ್ನಪ್ರಾಶನ ಹಾಗೂ ಸೀಮಂತ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಅತಿಥಿಗಳು ಶಿಶುಗಳಿಗೆ ಅನ್ನಪ್ರಾಶನ ಮಾಡಿಸಿದರು. ಇದೇ ವೇಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿತಾ ನಾಡಿಗೇರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಡಾ. ಕಮಲಾ ಬೈಲೂರ, ವಿಜಯಲಕ್ಷ್ಮೀ ಪಾಟೀಲ, ಹಾಗೂ ವಿವಿಧ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

