

ಧಾರವಾಡ: ಕಥೆಗಳು ಕಲ್ಪನೆ ಹಾಗೂ ಆಲೋಚನೆಗಳನ್ನು ಹುಟ್ಟುಹಾಕಿ ಓದುಗರಲ್ಲಿ ವೈಚಾರಿಕತೆಯನ್ನು ಸೃಷ್ಟಿಸುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಚೆನ್ನಬಸಪ್ಪ ಸಾದರ ಅವರ ಸಂಸ್ಮರಣೆಯಲ್ಲಿ ಆಯೋಜಿಸಿದ್ದ “ಮಿತಸಮಯ ಮಹಿಳಾ ಕಥಾಸಂಚಯ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಹತ್ತು ಜನ ಕಥೆಗಾರ್ತಿಯರು ತಮ್ಮ ಹತ್ತು ನಿಮಿಷದ ಅವಧಿಯಲ್ಲಿ ಹತ್ತು ಹೊಸ ಕಥೆಗಳನ್ನು ಸರಳ ಮತ್ತು ವಿಭಿನ್ನ ಶೈಲಿಯಲ್ಲಿ ವಾಚಿಸಿದರು. ಈ ಕಥೆಗಳು ವೈಚಾರಿಕತೆಗಳಿಂದ ಕೂಡಿದ್ದು, ವಿಷಯ ಆಯ್ಕೆಗಳು ಸೊಗಸಾಗಿವೆ. ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಕಿರುಸಾಹಿತ್ಯವನ್ನು ಬೆಳೆಸುವ ಈ ಪ್ರಯೋಗ ಹೊಸತನದಿಂದ ಕೂಡಿದೆ ಎಂದು ಡಾ. ಘಂಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಥಾಲೋಕ ಸೃಷ್ಟಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ೧೦ ಕಥೆಗಾರ್ತಿಯರ ಕಥೆಗಳ ಪ್ರಾರಂಭ ಹಾಗೂ ಅಂತ್ಯ ಮನೋಜ್ಞವಾಗಿ ಮೂಡಿಬಂದಿದೆ. ಮಹಿಳಾ ಕಥೆಗಾರ್ತಿಯರು ತಮ್ಮದೇ ಆದ ಕಥಾಲೋಕವನ್ನು ಸೃಷ್ಟಿಸಿದ್ದು ಅಭಿನಂದನೀಯ ಎಂದರು.
ಆಕಾಶವಾಣಿ ಬೆಂಗಳೂರಿನ ವಿಶ್ರಾಂತ ನಿರ್ದೇಶಕ ಡಾ. ಬಸವರಾಜ ಸಾದರ ಮಾತನಾಡಿ, ಇದು ಹೊಸ ಕಥೆಗಳ ವಾಚನದ ವಿನೂತನ ಪ್ರಯೋಗವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಲಬುರ್ಗಿಯ ಸಂಧ್ಯಾ ಹೊನಗುಂಟಿಕರ, ಧಾರವಾಡದ ಡಾ. ವಿನಯಾ ಒಕ್ಕುಂದ, ಬೆಳಗಾವಿಯ ಶ್ವೇತಾ ನರಗುಂದ, ಬೆಳಗಾವಿಯ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಹುಬ್ಬಳ್ಳಿಯ ನಿರ್ಮಲಾ ಶೆಟ್ಟರ, ಧಾರವಾಡದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸಿರ್ಸಿಯ ಡಾ. ಶೋಭಾ ಹೆಗಡೆ, ಧಾರವಾಡದ ಪ್ರಜ್ಞಾ ಮತ್ತಿಹಳ್ಳಿ, ಕಲಬುರ್ಗಿಯ ರೇಣುಕಾ ಕೋಡಗುಂಟಿ ಮತ್ತು ಹುಬ್ಬಳ್ಳಿಯ ಸುನಂದಾ ಕಡಮೆ ಕಥಾ ವಾಚನ ಮಾಡಿದರು.
ಅನಸೂಯಾ ಸಾದರ, ರಾಜೇಶ್ವರಿ ಸಾದರ ಮತ್ತು ಕವಿತಾ ಸಾದರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಾ ಚಿಕ್ಕೇರೂರ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಭಾವಿಕಟ್ಟಿ, ಶಶಿಧರ ತೋಡಕರ, ಡಾ. ಚೆನ್ನಪ್ಪ ಅಂಗಡಿ, ಸಿ.ಯು. ಬೆಳ್ಳಕ್ಕಿ, ಬಿ.ಎಸ್. ಶಿರೋಳ, ಮೋಹನ ಪಾಟೀಲ, ಬಿ.ಎಲ್. ಪಾಟೀಲ, ಬಿ. ಮಾರುತಿ, ಡಾ. ಎಂ.ಡಿ. ಒಕ್ಕುಂದ, ಪ್ರಕಾಶ ಕಡಮೆ ಸೇರಿದಂತೆ ಹಲವು ಸಾಹಿತಿಗಳು ಉಪಸ್ಥಿತರಿದ್ದರು.

