ಸಂಗೀತ ಸಾಮ್ರಾಟ್ ಪಂಡಿತ್ ಸವಾಯಿ ಗಂಧರ್ವರ ಸಂಗೀತ ಮಹೋತ್ಸವ ಸೆ. 15 ಹಾಗೂ 16 ರಂದು: ಸಂಗೀತ ಗಾರ್ತಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ರಾಷ್ಟ್ರೀಯ ಪುರಸ್ಕಾರ

Spread the love

ಕುಂದಗೋಳ: ಸಂಗೀತ ಸಾಮ್ರಾಟ್ ಪಂಡಿತ್ ಸವಾಯಿ ಗಂಧರ್ವರ 73ನೇ ಪುಣ್ಯತಿಥಿಯ ನಿಮಿತ್ತ ಕುಂದಗೋಳದಲ್ಲಿ ಎರಡು ದಿನಗಳ ಸಂಗೀತ ಮಹೋತ್ಸವವನ್ನು ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಸಹಯೋಗದಲ್ಲಿ ಸೆಪ್ಟೆಂಬರ್ 15 ಮತ್ತು 16 ರಂದು ಈ ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ ಮುಂಬಯಿಯ ಖ್ಯಾತ ಸಂಗೀತಗಾರ್ತಿ ಪದ್ಮಶ್ರೀ ಶ್ರೀಮತಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ‘ಸವಾಯಿ ಗಂಧರ್ವರ ರಾಷ್ಟ್ರೀಯ ಸಂಗೀತ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ.

ಸೆಪ್ಟೆಂಬರ್ 15ರಂದು ಸಂಜೆ 7 ಗಂಟೆಗೆ ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಕಣೇರಿ ಮಠದ ಪ. ಪೂ. ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಶಿರಹಟ್ಟಿ ಸಂಸ್ಥಾನ ಮಠದ ಜಗದ್ಗುರು ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವರು.

ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಚೇರಮನ್ ಡಾ. ಅರವಿಂದ ಎಂ. ಕಟಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಶ್ರೀ ಪ್ರಲ್ಲಾದ ಜೋಶಿ ಹಾಗೂ ಕುಂದಗೋಳ ಶಾಸಕ ಶ್ರೀ ಎಂ. ಆರ್. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಶಸ್ತಿಯನ್ನು ಶಾಸಕ ಎಂ.ಆರ್. ಪಾಟೀಲ ಮತ್ತು ಶ್ರೀಮತಿ ಶೀಲಾ ದೇಶಪಾಂಡೆ ಮಣೆ ಅವರು ಪ್ರದಾನ ಮಾಡುವರು.

ಪಟ್ಟಣ ಪಂಚಾಯತ್ ಅಧ್ಯಕ್ಷ ಶ್ರೀ ಶ್ಯಾಮಸುಂದರ ಬಿ. ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ಕರ್ಣಾಟಕ ಬ್ಯಾಂಕ್‌ನ ಎ.ಜಿ.ಎಂ. ಶ್ರೀ ಈರಣ್ಣ ನಾಗರಾಳ ಅವರು ಅತಿಥಿಗಳಾಗಿ ಭಾಗವಹಿಸುವರು.

ಎರಡು ದಿನಗಳ ಕಾಲ ಸಂಗೀತ ಕಲಾವಿದರ ಸಮಾಗಮ

ಸಂಗೀತೋತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 15ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಶ್ರೀ ಕೃಷ್ಣ ಕೃತೀಯ, ಕುಮಾರಿ ಅಮೋದಿನಿ ಮಹಾಲೆ, ಶ್ರೀ ವಾಸುದೇವ ಕಾರೇಕರ, ಶ್ರೀ ಮಹಾಬಳೇಶ್ವರ ಹೆಗಡೆ ಸೇರಿದಂತೆ ಅನೇಕ ಕಲಾವಿದರು ಸಂಗೀತ ಪ್ರಸ್ತುತಪಡಿಸಲಿದ್ದಾರೆ. ಸಂಜೆ 6 ಗಂಟೆಯಿಂದ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ವಿದುಷಿ ಪದ್ಮಿನಿ ರಾವ್, ಪಂ. ಉಮೇಶ ಚೌಧರಿ, ಪಂ. ಕೃಷ್ಣೇಂದ್ರ ವಾಡೇಕರ ಹಾಗೂ ಸಂ. ರತನ ಮೋಹನ ಶರ್ಮಾ ಅವರ ಗಾಯನ ನಡೆಯಲಿದೆ.

ಸೆಪ್ಟೆಂಬರ್ 16ರಂದು ಸಂಜೆ 6 ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಎಂ. ವೆಂಕಟೇಶ ಕುಮಾರ, ಪಂ. ಗಣಪತಿ ಭಟ್, ಸಂ. ವಿನೋದ ಡಿಗ್ರಜಕರ್, ವಿದುಷಿ ಅಕ್ಕಮಹಾದೇವಿ ಮತ್ತೂರು ಸೇರಿದಂತೆ ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪಂ. ಆನಂದ ಪಾಟೀಲ ಮತ್ತು ಪಂ. ರವೀಂದ್ರ ಯಾವಗಲ್ ಅವರ ತಬಲಾ ವಾದನ, ವಯಲಿನ್ ಟ್ರಿಯೋ ಹಾಗೂ ಸಿತಾರ್ ವಾದನ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮಕ್ಕೆ ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಕಾರ್ಯಕಾರಿ ಮಂಡಳಿ, ಸಂಗೀತೋತ್ಸವ ಸಮಿತಿ ಸದಸ್ಯರು, ಹಾಗೂ ಕುಂದಗೋಳ ವೈನ್ಸ್ ಅಸೋಸಿಯೇಶನ್, ಕರ್ನಾಟಕ ಬ್ಯಾಂಕ್, ಎಸ್‌ಬಿಐ, ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಿಕೊಂಡಿವೆ ಎಂದು ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯವರು ಪ್ರಕಟಣೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *