ಪವನ್ ಕಲ್ಯಾಣ್ ಮೂರನೇ ಸಂಸಾರವೂ ಛಿದ್ರ: 13 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಪವರ್ ಸ್ಟಾರ್ ದಂಪತಿ!

Spread the love

ಆಂಧ್ರಪ್ರದೇಶ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಕೊನಿಡೆಲಾ ಅವರು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ 13 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ.

ಜನಸೇನಾ ಪಕ್ಷದ ಮೂಲಕ ಸೋಮವಾರ ರಾತ್ರಿ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ, ಪರಸ್ಪರ ಗೌರವ ಮತ್ತು ತಿಳಿವಳಿಕೆಯೊಂದಿಗೆ ಪ್ರತ್ಯೇಕವಾಗುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ದಾಂಪತ್ಯ ಜೀವನ ಅಂತ್ಯಗೊಂಡರೂ ಪರಸ್ಪರ ಸ್ನೇಹ ಮತ್ತು ಗೌರವ ಮುಂದುವರಿಯಲಿದೆ. ಮಕ್ಕಳ ಪಾಲನೆ, ಪೋಷಣೆ ಹಾಗೂ ಅವರ ಭವಿಷ್ಯವೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೂರನೇ ಬಾರಿಯೂ ಮುರಿದುಬಿದ್ದ ದಾಂಪತ್ಯ!

ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನ ಈ ಹಿಂದಿನಿಂದಲೂ ಹಲವು ಬಾರಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 1997ರಲ್ಲಿ ನಂದಿನಿ ಅವರನ್ನು ಮೊದಲ ಬಾರಿಗೆ ವಿವಾಹವಾಗಿದ್ದ ಅವರು, 2009ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ನಟಿ ರೇಣು ದೇಸಾಯಿ ಅವರನ್ನು ಎರಡನೇ ವಿವಾಹವಾಗಿದ್ದ ಪವನ್ ಕಲ್ಯಾಣ್, 2012ರಲ್ಲಿ ಅವರಿಂದಲೂ ದೂರವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ನಂತರ 2013ರಲ್ಲಿ ರಷ್ಯನ್ ಮೂಲದ ಅನ್ನಾ ಕೊನಿಡೆಲಾ ಅವರನ್ನು ಮೂರನೇ ಬಾರಿಗೆ ವಿವಾಹವಾಗಿದ್ದರು. ಈ ದಾಂಪತ್ಯದಲ್ಲಿ ಇಬ್ಬರು ಮಕ್ಕಳಿದ್ದಾರೆ. ಇದೀಗ ಮೂರನೇ ವಿವಾಹವೂ ಅಂತ್ಯಗೊಂಡಿರುವ ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಒಂದೆಡೆ ರಾಜಕೀಯವಾಗಿ ಉತ್ತುಂಗದಲ್ಲಿದ್ದು, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಪವನ್ ಕಲ್ಯಾಣ್ ಅವರಿಗೆ ಮತ್ತೊಂದೆಡೆ ವೈಯಕ್ತಿಕ ಬದುಕಿನಲ್ಲಿ ಎದುರಾಗಿರುವ ಈ ಬೆಳವಣಿಗೆ ಟಾಲಿವುಡ್ ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *