
ನವಲಗುಂದ: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಈರುಳ್ಳಿ ಬೆಳೆದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ವರ್ಷ ಗರಿಷ್ಠ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಯೂ ಸಿಗದೆ ರೈತರು ಕಂಗಾಲಾಗಿದ್ದಾರೆ.
ಒಂದು ಎಕರೆ ಈರುಳ್ಳಿ ಬೆಳೆಯಲು ಕನಿಷ್ಠ ₹೫,೦೦೦ ದಿಂದ ₹೧೦,೦೦೦ ವರೆಗೆ ಖರ್ಚು ವೆಚ್ಚಗಳು ತಗಲುತ್ತವೆ. ಆದರೆ, ಬೆಳೆ ಕೈಗೆ ಬಂದ ನಂತರ ಕನಿಷ್ಠ ಬೆಂಬಲ ಬೆಲೆ ಸಿಗದೇ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಮಾಡಿದ ಖರ್ಚು ಸಹ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಖರೀದಿ ಕೇಂದ್ರ ತೆರೆಯಲು ಆಗ್ರಹ
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಈರುಳ್ಳಿ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ತುರ್ತಾಗಿ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಎಲ್ಲ ಪ್ರಮುಖ ಮಾರುಕಟ್ಟೆಗಳಲ್ಲಿ ಈರುಳ್ಳಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಂಟಾದ ಬೆಳೆ ಹಾನಿಯ ಪರಿಹಾರವೂ ಸಿಗದೆ ಈ ಭಾಗದ ರೈತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರೈತಪರ ಸರ್ಕಾರವೆಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷವು ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ, ಶೀಘ್ರದಲ್ಲಿಯೇ ಮತ್ತೊಂದು ಉಗ್ರ ರೈತ ಹೋರಾಟ ಆರಂಭಿಸುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಮುಖಂಡ ಹಾಗೂ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ದೇವರಾಜ ಬ. ದಾಡಿಬಾವಿ, ನವಲಗುಂದ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ನಿಂಗಯ್ಯ ಬಣ್ಣದನೊಲಮಠ, ರೈತ ಮುಖಂಡರಾದ ಮಂಜುನಾಥ ಕಾಲಾವಾಡ, ಸಿದ್ದಾರೋಡ ಮೂಗನವರ, ಆರ್. ಎಂ. ಅಂಕಲಿ ಮುಂತಾದವರು ಸರ್ಕಾರವನ್ನು ಆಗ್ರಹಪಡಿಸಿದರು.

