
ಕುಂದಗೋಳ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯಿಂದ ಯಾರೂ ಹೊರಗುಳಿಯಬಾರದು ಎಂದು ತಹಶೀಲ್ದಾರ್ ರಾಜು ಮಾವರಕರ ಅವರು ಮನವಿ ಮಾಡಿದ್ದಾರೆ. ಸಮೀಕ್ಷೆಯಿಂದ ಬಿಟ್ಟುಹೋದವರು ತಮ್ಮ ಹೆಸರು ನೋಂದಾಯಿಸಲು ಅಕ್ಟೋಬರ್ 18, ಶನಿವಾರ ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ, ಬೆಳೆ ಹಾನಿ ಪರಿಹಾರ ವಿತರಣೆ ಹಾಗೂ ಗ್ರಾಮ ಸಹಾಯಕರ ನೇಮಕಾತಿ ಕುರಿತು ಮಾಹಿತಿ ನೀಡಿದರು.
ಶೇ. 101 ಸಾಧನೆ — ಆದರೂ 50 ಸಾವಿರ ಜನ ಸಮೀಕ್ಷೆಯಿಂದ ಹೊರಗೆ!
“ತಾಲೂಕಿನಲ್ಲಿ ನಿಗದಿಪಡಿಸಿದ್ದ 38,969 ಮನೆಗಳ ಗುರಿ ಮೀರಿ 42,775 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ ಶೇ. 101 ರಷ್ಟು ಸಾಧನೆ ಮಾಡಲಾಗಿದೆ. ಈ ಕಾರ್ಯದಲ್ಲಿ 360 ಗಣತಿದಾರರು ಶ್ರಮಿಸಿದ್ದಾರೆ,” ಎಂದು ತಹಶೀಲ್ದಾರ್ ಹೇಳಿದರು. ಆದರೆ, ತಾಲೂಕಿನ ಒಟ್ಟು 2.01 ಲಕ್ಷ ಜನಸಂಖ್ಯೆಯ ಪೈಕಿ 1.52 ಲಕ್ಷ ಜನರ ಸಮೀಕ್ಷೆ ಮಾತ್ರ ಸಾಧ್ಯವಾಗಿದೆ. ವಲಸೆ, ಮರಣ, ಮನೆಗೆ ಬೀಗ ಹಾಕಿರುವುದು ಹಾಗೂ ಕೆಲವರು ಮಾಹಿತಿ ನೀಡಲು ನಿರಾಕರಿಸಿದ್ದರಿಂದ ಉಳಿದ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ತಿಳಿಸಿದರು.
ಹೊರಗುಳಿದವರು ತಕ್ಷಣ ಹೆಸರು ನೋಂದಾಯಿಸಿ
ಸಮೀಕ್ಷೆಯಿಂದ ಬಿಟ್ಟುಹೋದ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿರುವ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ತಮ್ಮ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬಹುದು. ಗಣತಿದಾರರು ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
📞 ಶಿವಾನಂದ ಮಲ್ಲಪ್ಪ ನೆಟ್ಟಾಲಿ: 7090143816
📞 ದೀಪಕ್ ಪಾಂಡುರಂಗ ಭಜಂತ್ರಿ: 9035392704
ಬೆಳೆ ಹಾನಿ ಪರಿಹಾರ ಶೀಘ್ರ ವಿತರಣೆ
ತಾಲೂಕಿನಲ್ಲಿ ಅತಿವೃಷ್ಟಿಯಿಂದ 15,208 ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ. ಇದರ ಪೈಕಿ 12,849 ಹೆಕ್ಟೇರ್ ಪ್ರದೇಶದ ರೈತರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್‌ಗೆ ₹8,500 ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ₹8,500 ಸೇರಿ ಒಟ್ಟು ₹17,000 ನೀಡಲಾಗುತ್ತದೆ. ಒಬ್ಬ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್‌ಗೆ ₹34,000 ಪರಿಹಾರ ಸಿಗಲಿದೆ. “ಇನ್ನು ಮೂರ್ನಾಲ್ಕು ದಿನಗಳಲ್ಲಿ ಈ ಪರಿಹಾರ ಹಣ ರೈತರ ಖಾತೆಗಳಿಗೆ ಜಮಾ ಆಗಲಿದೆ,” ಎಂದು ತಹಶೀಲ್ದಾರ್ ಭರವಸೆ ನೀಡಿದರು.
ಗ್ರಾಮ ಸಹಾಯಕರ ನೇಮಕಾತಿಗೆ ಅರ್ಜಿ ಆಹ್ವಾನ
ತಾಲೂಕಿನ ಹಿರೇನರ್ತಿ ಮತ್ತು ಇಂಗಳಗಿ ಗ್ರಾಮಗಳಿಗೆ ಗ್ರಾಮ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು 25 ರಿಂದ 65 ವರ್ಷ ವಯೋಮಿತಿಯವರಾಗಿರಬೇಕು, ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸ್ಥಳೀಯ ನಿವಾಸಿಯಾಗಿರಬೇಕು. ವಾಲಿ ಕಾರಿಕೆ ಮಾಡುವ ಸಮುದಾಯದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಹಶೀಲ್ದಾರ್ ರಾಜು ಮಾವರಕರ ತಿಳಿಸಿದ್ದಾರೆ.

