ಸರ್ಕಾರ ರಚಿಸಲು ಡಿ.ಕೆ. ಶಿವಕುಮಾರ್‌ಗೆ ರಾಜ್ಯಪಾಲರ ಆಹ್ವಾನ, ಜೂನ್ 3ಕ್ಕೆ ಪ್ರಮಾಣವಚನ

Spread the love

ಬೆಂಗಳೂರು: ಕರ್ನಾಟಕ ರಾಜಕೀಯದ ಬಹುದೊಡ್ಡ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಈಗ ಅಂತಿಮ ಹಂತಕ್ಕೆ ತಲುಪಿದ್ದು, ನೂತನ ಸರ್ಕಾರ ರಚಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾದ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ಲೋಕಭವನಕ್ಕೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ತಮಗೆ ಬೆಂಬಲವಿರುವ ಅರ್ಹ ಶಾಸಕರ ಸಹಿ ಮತ್ತು ವಿವರಗಳ ಪಟ್ಟಿಯನ್ನು ಪರಿಶೀಲಿಸಿದ ರಾಜ್ಯಪಾಲರು, ಸಾಂವಿಧಾನಿಕ ಪ್ರಕ್ರಿಯೆಯಂತೆ ಸಂಖ್ಯಾಬಲವನ್ನು ಖಚಿತಪಡಿಸಿಕೊಂಡು ನೂತನ ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಹಾಗೂ ಹಂಗಾಮಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಒಮ್ಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ವಿಶೇಷವೆಂದರೆ, ಸಿದ್ದರಾಮಯ್ಯ ಅವರೇ ಡಿಕೆಶಿ ಹೆಸರನ್ನು ನಾಯಕನ ಸ್ಥಾನಕ್ಕೆ ಸೂಚಿಸಿದ್ದು, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಅವಿರೋಧವಾಗಿ ಪಟ್ಟಾಭಿಷೇಕಕ್ಕೆ ಹಾದಿ ಸುಗಮವಾಯಿತು. ಈ ಚಾಣಾಕ್ಷ ನಡೆ ಕೈ ಪಾಳೆಯದ ಒಗ್ಗಟ್ಟನ್ನು ಸಾಬೀತುಪಡಿಸಿದ್ದು, ತಮ್ಮನ್ನು ನಾಯಕನನ್ನಾಗಿ ಆರಿಸಿದ ಎಲ್ಲಾ ಶಾಸಕರಿಗೆ ಡಿ.ಕೆ. ಶಿವಕುಮಾರ್ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ರಾಜಭವನದಲ್ಲಿ ಹಕ್ಕು ಮಂಡಿಸುವ ವೇಳೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಪರಮೇಶ್ವರ, ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ, ಕೆ.ಎಚ್. ಮುನಿಯಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಬುಧವಾರ (ಜೂನ್ 3) ಸಂಜೆ 5.15ರ ಗೋಧೂಳಿ ಶುಭಲಗ್ನದಲ್ಲಿ ಲೋಕಭವನದ ಗಾಜಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ. ಈ ಮೊದಲು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂದೆ ಇಲ್ಲವೇ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತಾದರೂ, ನಗರದ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಕೊನೆಕ್ಷಣದಲ್ಲಿ ಲೋಕಭವನದಲ್ಲಿ ಸ್ಥಳ ನಿಗದಿಗೊಳಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೆಹಲಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ.

ಇತ್ತ ರಾಜ್ಯಪಾಲರ ಭೇಟಿ ಮುಗಿಸಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಂದೇ ವಾಹನದಲ್ಲಿ ಲೋಕಭವನದಿಂದ ಹೊರಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ‘ಡಿಕೆ… ಡಿಕೆ…’ ಎಂಬ ಘೋಷಣೆಗಳಿಂದ ಇಡೀ ಆವರಣ ಮೊಳಗಿತು. ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿದ್ದರಾಮಯ್ಯ ಮತ್ತು ಡಿಕೆಶಿ ಒಟ್ಟಾಗಿ ಬರುತ್ತಿದ್ದ ದೃಶ್ಯವು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದು, ಇಡೀ ರಾಜ್ಯದ ಕೈ ಪಾಳೆಯದಲ್ಲಿ ಸದ್ಯ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *