
ಕೊಳ್ಳೇಗಾಲ: ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೇಘ ಶಾಲಾ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಮೇಘ ಶಾಲಾ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಿಜಿಟಲ್ ಬೋಧನಾ ಸಾಧನಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಮೇಘ ಶಾಲಾ ಸಂಸ್ಥೆಯು ಉಚಿತವಾಗಿ ಟಿವಿ, ಟ್ಯಾಬ್, ಯುಪಿಎಸ್ ಮತ್ತು ಪ್ರೊಜೆಕ್ಟರ್‌ಗಳಂತಹ ಡಿಜಿಟಲ್ ಬೋಧನಾ ಸಾಮಗ್ರಿಗಳನ್ನು ವಿತರಿಸುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿನ ನುರಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಪೂರ್ಣ ಹಾಗೂ ಗುಣಮಟ್ಟದ ಬೋಧನೆ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದ ಅವರು, ಸಂಸ್ಥೆಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅವರು, ಮೇಘ ಶಾಲಾ ಸಂಸ್ಥೆಯು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಅಲ್ಲಿನ ಮಕ್ಕಳಿಗೆ ಶಿಕ್ಷಕರಿಂದ ಉತ್ತಮ ಬೋಧನೆ ದೊರೆಯಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಡಿಜಿಟಲ್ ಸಾಧನಗಳನ್ನು ವಿತರಿಸುತ್ತಿದೆ. 2026-27ನೇ ಸಾಲಿನಲ್ಲಿ 10 ಟ್ಯಾಬ್, 10 ಟಿವಿ, 10 ಪ್ರೊಜೆಕ್ಟರ್ ಹಾಗೂ ಯುಪಿಎಸ್‌ಗಳನ್ನು ಉಚಿತವಾಗಿ ನೀಡಿದೆ ಎಂದು ಮಾಹಿತಿ ನೀಡಿದರು.

ಮೇಘ ಶಾಲಾ ಸಂಸ್ಥೆಯ ಇಂಟರ್ನೆಟ್ ಮುಖ್ಯಸ್ಥೆ ಜಯಲಕ್ಷ್ಮಿ ಮಾತನಾಡಿ, ಕೊಳ್ಳೇಗಾಲ ಮತ್ತು ಚಾಮರಾಜನಗರ ಭಾಗದ ಸರ್ಕಾರಿ ಶಾಲೆಗಳ ಶಿಕ್ಷಕರು ಸಂಸ್ಥೆಗೆ ಉತ್ತಮ ಸಹಕಾರ ನೀಡಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎಂಬ ಉದ್ದೇಶದಿಂದ ಅಗತ್ಯ ಸಾಧನ-ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಚಿಲಕವಾಡಿ ಇಮ್ಮಡಿ ಗುರುಲಿಂಗ ಸ್ವಾಮಿ ಹಾಗೂ ಮುಸ್ಲಿಂ ಧರ್ಮಗುರುಗಳು ಸಾನ್ನಿಧ್ಯ ವಹಿಸಿದ್ದರು. ಗ್ಯಾರಂಟಿ ಯೋಜನೆಯ ಅಧ್ಯಕ್ಷ ರಾಜೇಂದ್ರ, ಮಲೆ ಮಾದೇಶ್ವರ ಪ್ರಾಧಿಕಾರದ ನಿರ್ದೇಶಕ ತೋಟೇಶ್, ಬಿಆರ್‌ಸಿ ಮಹದೇವ್ ಕುಮಾರ್, ಮೇಘ ಶಾಲಾ ಸಂಸ್ಥೆಯ ತರಬೇತುದಾರ ರಾಘವೇಂದ್ರ, ಅನುಷ್ಠಾನ ಅಧಿಕಾರಿ ರವಿಚಂದ್ರನ್, ಮಾಜಿ ನಗರಸಭೆ ಅಧ್ಯಕ್ಷ ಶಾಂತರಾಜು, ಯುವ ಮುಖಂಡ ಚೇತನ್ ದೊರೆರಾಜ್, ಮ್ಯಾನೇಜರ್, ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು, ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
