ನ್ಯಾಯಮೂರ್ತಿ ಮೇಲೆ ಶೂ ಎಸೆದ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

Spread the love

ನವಲಗುಂದ: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ವಿರುದ್ಧ ದೇಶದ್ರೋಹದ ದೂರು ದಾಖಲಿಸಿ, ಆತನನ್ನು ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.) ತಾಲ್ಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಸಮಿತಿಯ ಸದಸ್ಯರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ ಕಚೇರಿಯ ಶಿರೇಸ್ತದಾರ ಗಣೇಶ ಚಳ್ಳಕೆರೆ ಹಾಗೂ ಪಿ.ಎಸ್.ಐ. ಜನಾರ್ಧನ ಭಟ್ರಳ್ಳಿ ಅವರ ಮೂಲಕ ಸಲ್ಲಿಸಿದರು.

‘ಆರೋಪಿಯನ್ನು ಗಡಿಪಾರು ಮಾಡಿ’
ಈ ವೇಳೆ ಮಾತನಾಡಿದ ಮುಖಂಡ ಶಿವು ಪೂಜಾರ ಅವರು, “ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದು, ನ್ಯಾಯಾಂಗದ ಪಾವಿತ್ರ್ಯತೆ ಹಾಳುಮಾಡಲು ಪ್ರಯತ್ನಿಸಲಾಗಿದೆ. ಈ ಪ್ರಕರಣದ ಆರೋಪಿಯ ವಿರುದ್ಧ ದೇಶದ್ರೋಹದ ಮೊಕದ್ದಮೆ ಹೂಡಿ ತಕ್ಷಣ ದೇಶದಿಂದ ಗಡಿಪಾರು ಮಾಡಬೇಕು” ಎಂದು ಆಗ್ರಹಿಸಿದರು.

ರೈತ ಹೋರಾಟಗಾರರಾದ ರಾಗುನಾಥ ನಡುವಿನಮನಿ ಮತ್ತು ಮೈಲಾರಪ್ಪ ವೈದ್ಯ ಮಾತನಾಡಿ, “ಭಾರತ ದೇಶದಲ್ಲಿ ಮೂಲಭೂತವಾದಿಗಳು ತಮ್ಮ ಮನುವಾದವನ್ನು ಅಮಾನವೀಯ ರೀತಿಯಲ್ಲಿ ಮರೆಯುತ್ತಿರುವುದು ಶೋಚನೀಯ ಸಂಗತಿ. ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ನಿಂಗಪ್ಪ ಕೆಳಗೇರಿ, ರಮೇಶ್ ಮಲ್ಲದಾಸರ, ತಾಲ್ಲೂಕು ಸಂಚಾಲಕ ಕೃಷ್ಣ ಮಾದರ, ನಗರ ಸಂಚಾಲಕ ಕರಿಯಪ್ಪ ಹುಳಕಣ್ಣವರ, ಕಾಶೀನಾಥ ಕಾಳೆ, ರಾಮಪ್ಪ ಮಾದರ, ಶಂಕ್ರಪ್ಪ ಶಿರಗುಪ್ಪಿ, ಗದಿಗೆಪ್ಪ ಎಕ್ಕೇರಪ್ಪನವರ, ದಿಲೀಪ ರತ್ನಾಕರ, ಸಂತೋಷ ಮಾದರ, ಎಕ್ಕೆರಪ್ಪ ನಾಗಣ್ಣವರ ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *