ರಾಜಕೀಯ ಹೈಡ್ರಾಮಾಕ್ಕೆ ತೆರೆ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ!

Spread the love

ರಾಜಕೀಯ ಹೈಡ್ರಾಮಾಕ್ಕೆ ತೆರೆ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟದ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಇಂದು ಬೆಳಿಗ್ಗೆ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಆಯೋಜಿಸಿದ್ದ ಮಹತ್ವದ ಉಪಹಾರ ಕೂಟದ ಸಭೆಯಲ್ಲಿ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

​ನವದೆಹಲಿಯ ಇಂದಿರಾ ಭವನದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಹೈಕಮಾಂಡ್ ಸಭೆಯ ತೀರ್ಮಾನದಂತೆಯೇ ತಾವು ಈ ಹೆಜ್ಜೆ ಇಡುತ್ತಿರುವುದಾಗಿ ಸಿದ್ದರಾಮಯ್ಯ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. “ಕಳೆದ ಮೂರು ವರ್ಷಗಳ ಕಾಲ ನನಗೆ ಎಲ್ಲರೂ ಉತ್ತಮ ಸಹಕಾರ ನೀಡಿದ್ದೀರಿ. ನಮ್ಮ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಹೊಣೆಗಾರಿಕೆ ಈಗ ನಿಮ್ಮ ಮೇಲಿದೆ. ಮುಂದಿನ ರಾಜಕೀಯ ತೀರ್ಮಾನಗಳನ್ನು ಹೈಕಮಾಂಡ್ ನಿರ್ಧರಿಸಲಿದೆ,” ಎಂದು ಹೇಳುತ್ತಾ ಸಿದ್ದರಾಮಯ್ಯ ಅವರು ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದರು.

​ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್!

​ಸಿದ್ದರಾಮಯ್ಯ ಅವರ ಈ ರಾಜೀನಾಮೆ ಘೋಷಣೆಯೊಂದಿಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೇರುವ ಹಾದಿ ಸುಗಮವಾದಂತಾಗಿದೆ. ಉಪಹಾರ ಕೂಟಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭಾವನಾತ್ಮಕವಾಗಿ ಆಲಂಗಿಸಿಕೊಂಡರು. ತದನಂತರ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಸಂಗವೂ ನಡೆಯಿತು. ಈ ವೇಳೆ ಸಿದ್ದರಾಮಯ್ಯ ಅವರು ಡಿಕೆಶಿ ಅವರಿಗೆ ಬೆನ್ನು ತಟ್ಟಿ ಅಭಿನಂದನೆ ಸಲ್ಲಿಸಿದರು. ಇದಕ್ಕೂ ಮುನ್ನ ಉಭಯ ನಾಯಕರು ಸುಮಾರು 11 ನಿಮಿಷಗಳ ಕಾಲ ಗೌಪ್ಯವಾಗಿ ರಹಸ್ಯ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.

​ಸುರ್ಜೇವಾಲಾ ನಡೆ ಸುತ್ತ ಅನುಮಾನದ ಹುತ್ತ

​ಒಂದೆಡೆ ಕಾವೇರಿ ನಿವಾಸದಲ್ಲಿ ಇಷ್ಟೆಲ್ಲಾ ಮಹತ್ವದ ವಿದ್ಯಮಾನಗಳು ಜರುಗುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ನಡೆ ಮಾತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಅವರು ಈ ಹೈವೋಲ್ಟೇಜ್ ಉಪಹಾರ ಕೂಟಕ್ಕೆ ಗೈರುಹಾಜರಾಗಿದ್ದು, ಖಾಸಗಿ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದಾರೆ. ಸಭೆ ಸಂಪೂರ್ಣವಾಗಿ ಮುಗಿದ ನಂತರವಷ್ಟೇ ಅವರು ಕಾವೇರಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

​ತಾಂತ್ರಿಕ ಕಾರಣಕ್ಕೆ ರಾಜೀನಾಮೆ ಸಲ್ಲಿಕೆ ವಿಳಂಬ?

​ಮುಖ್ಯಮಂತ್ರಿಗಳು ರಾಜೀನಾಮೆ ಘೋಷಿಸಿದ್ದರೂ, ಅದನ್ನು ಅಧಿಕೃತವಾಗಿ ರಾಜ್ಯಪಾಲರಿಗೆ ಸಲ್ಲಿಸುವ ಪ್ರಕ್ರಿಯೆ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಸದ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲಟ್ ಅವರು ತುರ್ತು ಕಾರಣಗಳ ನಿಮಿತ್ತ ಮುಂಬೈಗೆ ತೆರಳಿದ್ದಾರೆ. ನಿಯಮಗಳ ಪ್ರಕಾರ, ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜಭವನದ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದರೆ ಅದು ಕಾನೂನುಬದ್ಧವಾಗಿ ಅಂಗೀಕಾರವಾಗುವುದಿಲ್ಲ. ಹೀಗಾಗಿ ರಾಜ್ಯಪಾಲರು ಇಂದು ಸಂಜೆಯೊಳಗೆ ಬೆಂಗಳೂರಿಗೆ ವಾಪಸ್ ಆಗುತ್ತಾರೋ ಅಥವಾ ರಾಜೀನಾಮೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ

Leave a Reply

Your email address will not be published. Required fields are marked *