
ಚಾಮರಾಜನಗರ: ಜಿಲ್ಲೆಯ ನಾಗಮಲೆ ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆಗೆ ತೆರಳಿದ್ದ ಬಾಲಕನನ್ನು ಬಲಿ ಪಡೆದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ. ಕಳೆದ 15 ದಿನಗಳಿಂದ ನಿರಂತರವಾಗಿ ನಡೆದ ಬೃಹತ್ ಕಾರ್ಯಾಚರಣೆಯ ಫಲವಾಗಿ ಹನೂರು ತಾಲೂಕಿನ ಇಂಡಿಗನತ್ತ ಹಾಡಿ ಸಮೀಪ ಇರಿಸಲಾಗಿದ್ದ ಬೋನಿನಲ್ಲಿ ಹೆಣ್ಣು ಚಿರತೆ ಸೆರೆಯಾಗಿದೆ. ಇದರಿಂದ ಕಾಡಂಚಿನ ಗ್ರಾಮಸ್ಥರು ಹಾಗೂ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರು ಮೂಲದ ಹರ್ಷಿತ್ ಎಂಬ ಬಾಲಕ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹರಕೆ ತೀರಿಸಲು ಪಾದಯಾತ್ರೆ ಕೈಗೊಂಡಿದ್ದ ವೇಳೆ, ದಟ್ಟ ಅರಣ್ಯದ ಮಾರ್ಗದಲ್ಲಿ ನಡೆದು ಹೋಗುತ್ತಿದ್ದಾಗ ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ದಾಳಿ ನಡೆಸಿ ಬಾಲಕನನ್ನು ಕೊಂದು ತಿಂದಿತ್ತು. ಈ ಘಟನೆ ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿತ್ತು.
ಘಟನೆಯ ಬಳಿಕ ಮಲೆ ಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯಜೀವಿ ವಿಭಾಗದ ಸಿಬ್ಬಂದಿ ಜಂಟಿಯಾಗಿ ಚಿರತೆ ಸೆರೆಗೆ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದರು. ಸುಮಾರು 30 ಮಂದಿ ಚಿರತೆ ತಜ್ಞರು, ಶಾರ್ಪ್ ಶೂಟರ್ಗಳು ಹಾಗೂ ಅರಣ್ಯ ವೀಕ್ಷಕರು ಕಳೆದ ಎರಡು ವಾರಗಳಿಂದ ಹಗಲಿರುಳು ದಟ್ಟ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಅವಧಿಯಲ್ಲಿಯೂ ಚಿರತೆ ಐದಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳ ಮೇಲೆ ದಾಳಿ ನಡೆಸಿ ಕೊಂದು ತಿಂದಿತ್ತು.
ಚಿರತೆ ಹಾವಳಿ ತಡೆಯಲು ಅರಣ್ಯ ಇಲಾಖೆಯು ಇಂಡಿಗನತ್ತ, ನಾಗಮಲೆ, ಮೆಂದಾರೆ ಸೇರಿದಂತೆ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಬೋನುಗಳನ್ನು ಅಳವಡಿಸಿತ್ತು. ಇಂಡಿಗನತ್ತ ಹಾಡಿ ಬಳಿ ಇರಿಸಲಾಗಿದ್ದ ವಿಶೇಷ ‘ತುಮಕೂರು ಕೇಜ್’ನಲ್ಲಿ ಶ್ವಾನವೊಂದನ್ನು ಕಟ್ಟಲಾಗಿತ್ತು. ಇಂದು ಮುಂಜಾನೆ ಶ್ವಾನವನ್ನು ಬೇಟೆಯಾಡಲು ಬಂದ ಚಿರತೆಯು ಬೋನಿನೊಳಗೆ ಪ್ರವೇಶಿಸುತ್ತಿದ್ದಂತೆ ಸೆರೆ ಸಿಕ್ಕಿದೆ.
ಆದರೆ ಸೆರೆಯಾದ ಈ ಚಿರತೆಯೇ ಬಾಲಕ ಹರ್ಷಿತ್ನನ್ನು ಕೊಂದ ನರಭಕ್ಷಕ ಚಿರತೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿರತೆಯ ಲಾಲಾರಸ, ಮಲ ಹಾಗೂ ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮಧ್ಯೆ ಹೆಣ್ಣು ಚಿರತೆ ಸೆರೆ ಸಿಕ್ಕ ಬೆನ್ನಲ್ಲೇ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿರುವುದು ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿಸಿದೆ.

