
ನವಲಗುಂದ: ಸ್ಥಳೀಯ ಶ್ರೀ ಶಂಕರ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದ್ದು, ಆಡಳಿತ ಮಂಡಳಿಯ ಚೇರ್ಮನ್ ಬಿ.ಸಿ. ಪೂಜಾರ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು, ಸಂಸ್ಥೆಯ ಅಧ್ಯಕ್ಷರಾಗಿದ್ದ ಪಂಚಗ್ರಹ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಸಹಿಗಳನ್ನು ದುರುಪಯೋಗಪಡಿಸಿಕೊಂಡು ಹೊಸ ಆಡಳಿತ ಮಂಡಳಿ ರಚಿಸಿದ್ದಾರೆ ಎಂದು ಪಟ್ಟಣದ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಪಟ್ಟಣದ ಪಂಚಗ್ರಹ ಹಿರೇಮಠದಲ್ಲಿ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹಿರಿಯರಾದ ಲೋಕನಾಥ ಹೆಬಸೂರ, ಅಣ್ಣಪ್ಪ ಬಾಗಿ ಹಾಗೂ ರಾಯನಗೌಡ ಪಾಟೀಲ್ ಮಾತನಾಡಿ, ಶ್ರೀ ಶಂಕರ ಕಾಲೇಜಿಗೆ ಶ್ರೀಮಠದಿಂದ 40 ಎಕರೆ ಭೂಮಿಯನ್ನು ದಾನವಾಗಿ ನೀಡಲಾಗಿದೆ. ಶ್ರೀಮಠದ ಉತ್ತರಾಧಿಕಾರಿಗಳೇ ಕಾಲೇಜಿನ ಅಧ್ಯಕ್ಷ ಹಾಗೂ ಚೇರ್ಮನ್ ಆಗಿರಬೇಕು ಎಂಬ ನಿಯಮ ಮೂಲ ಬೈಲಾದಲ್ಲಿದೆ. ಆದರೆ, ಕಾಲೇಜಿನ ಹಿಂದಿನ ಪ್ರಾಚಾರ್ಯರು ಹಾಗೂ ಚೇರ್ಮನ್ ಅವರು ಮಠಾಧೀಶರ ಗಮನಕ್ಕೆ ತರದೆ ಮೂಲ ಬೈಲಾವನ್ನು ತಿದ್ದುಪಡಿ ಮಾಡಿಕೊಂಡು, ಶ್ರೀಗಳನ್ನು ಆಡಳಿತ ಮಂಡಳಿಯಿಂದ ಹೊರಗಿಟ್ಟು ಸ್ವಜಾತಿಯ ಜನರನ್ನು ಒಳಗೊಂಡ ಹೊಸ ಆಡಳಿತ ಮಂಡಳಿ ರಚಿಸಿದ್ದಾರೆ ಎಂದು ಆರೋಪಿಸಿದರು.
ಕಳೆದ 60 ವರ್ಷಗಳಿಂದ ಸಂಸ್ಥೆಗೆ ಸೇವೆ ಸಲ್ಲಿಸಿದ ಶಿಕ್ಷಣ ಪ್ರೇಮಿಗಳು ಹಾಗೂ ದಾನಿಗಳ ಭಾವಚಿತ್ರಗಳನ್ನು ಆಡಳಿತ ಮಂಡಳಿಯ ಕಾರ್ಯಾಲಯದಿಂದ ತೆರವುಗೊಳಿಸಿ ಅವಮಾನಿಸಲಾಗಿದೆ. ಚೇರ್ಮನ್ ಬಿ.ಸಿ. ಪೂಜಾರ ಅವರ ಈ ವರ್ತನೆಯನ್ನು ಖಂಡಿಸಿ ಈಗಾಗಲೇ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯಗಳು ನಡೆಯುತ್ತಿದ್ದರೂ, ಹಳೆಯ ಬೈಲಾವನ್ನು ರದ್ದುಪಡಿಸದೆ ಕಾನೂನುಬಾಹಿರವಾಗಿ ಹೊಸ ಬೈಲಾ ರಚಿಸಲಾಗಿದೆ ಎಂದು ಮುಖಂಡರು ದೂರಿದರು.
ಉಗ್ರ ಹೋರಾಟದ ಎಚ್ಚರಿಕೆ
ಈ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಮಧ್ಯಸ್ಥಿಕೆ ವಹಿಸಿ ರಾಜೀ ಸಂಧಾನ ನಡೆಸುವ ಭರವಸೆ ನೀಡಿದ್ದಾರೆ. ಸಂಧಾನದ ಮೂಲಕ ಸಮಸ್ಯೆ ಬಗೆಹರಿಯುವವರೆಗೆ ಬಿ.ಸಿ. ಪೂಜಾರ ಹಾಗೂ ಅವರ ಬೆಂಬಲಿಗರು ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮತ್ತು ಸಾರ್ವಜನಿಕರಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಪಟ್ಟಣದ ನಾಗರಿಕರು ಹಾಗೂ ಭಕ್ತರು ಒಗ್ಗೂಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಿರಿಯ ಶ್ರೀಗಳಾದ ಶ್ರೀ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವರಾಜ ನರಗುಂದ, ಗಂಗಪ್ಪ ಹಳ್ಳದ, ಎಂ.ಡಿ. ಕುಲಕರ್ಣಿ, ಬಾಬಾಜಾನ ಮುಲ್ಲಾ, ಬಸವರಾಜ ಚಕ್ರಸಾಲಿ, ನರಸಿಂಹ ಇನಾಮತಿ, ಈರಣ್ಣ ಚವಡಿ, ಮಹಾಂತೇಶ ಕಲಾಲ, ಯಲ್ಲಪ್ಪ ಭೋವಿ, ಶಿವಾಜಿ ಕಲಾಲ, ಭೀಮಣ್ಣ ಹೆಬ್ಬಳ್ಳಿ, ಶಿರಾಜ ಧಾರವಾಡ ಸೇರಿದಂತೆ ನೂರಾರು ಭಕ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.