
ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿ ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಮೃತರನ್ನು ನಕ್ಕುಂದಿ ಗ್ರಾಮದ ನಾಗೇಂದ್ರ (21) ಹಾಗೂ ಪಾಲಾರ್ ಗ್ರಾಮದ ನದಿಯಾ (19) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಪೊನ್ನಾಚಿ ಗ್ರಾಮದಲ್ಲಿ ಹಬ್ಬದ ಸಂಭ್ರಮ ನಡೆಯುತ್ತಿದ್ದು, ಮೃತ ಯುವಕ ನಾಗೇಂದ್ರ ಇಲ್ಲಿನ ತನ್ನ ಅಜ್ಜ ಶಿವಮಾದಯ್ಯ ಅವರ ಮನೆಗೆ ಬಂದಿದ್ದ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ನದಿಯಾ ಕಾಣೆಯಾಗಿದ್ದಾರೆ ಎಂದು ಆಕೆಯ ಪೋಷಕರು ಈ ಹಿಂದೆ ಮಹದೇಶ್ವರ ಬೆಟ್ಟ ಪೊಲೀಸ್ ಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ಇಂದು ಇಬ್ಬರು ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರ ಹಾಗೂ ಸ್ಥಳೀಯರ ಆಘಾತಕ್ಕೆ ಕಾರಣವಾಗಿದೆ.
ಪ್ರೇಮ ಸಂಬಂಧದ ಹಿನ್ನೆಲೆಯಲ್ಲೇ ಈ ಆತ್ಮಹತ್ಯೆ ನಡೆದಿರಬಹುದು ಎಂದು ಸ್ಥಳೀಯವಾಗಿ ಚರ್ಚಿಸಲಾಗುತ್ತಿದೆಯಾದರೂ, ಸಾವಿಗೆ ನಿಖರವಾದ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈ ಘಟನೆಯಿಂದಾಗಿ ಕ್ಷಣಾರ್ಧದಲ್ಲಿ ದುಃಖದ ಮೌನ ಆವರಿಸಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದ ತಕ್ಷಣ ಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ಕಾರ್ತಿಕ್ ಗೌಡ, ಹನೂರ

