
ಧಾರವಾಡ: ನಗರದ ಸ್ನೇಹಿತರು ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ವಿಶೇಷ ಸಮಾರಂಭವನ್ನು ಮಾರ್ಚ್ 28ರಂದು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 5:30ಕ್ಕೆ ಧಾರವಾಡದ ಜಿಲ್ಲಾ ಸಾಹಿತ್ಯ ಪರಿಷತ್ ಭವನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಹುಬ್ಬಳ್ಳಿಯ ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ ಶ್ರೀಮತಿ ಮಾಲತಿ ಕುಂದಾಪುರ ಅವರಿಗೆ ಪ್ರತಿಷ್ಠಿತ ‘ರಂಗ ಸ್ನೇಹಿತ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿಜಯೀಂದ್ರ ಅರ್ಚಕ ತಿಳಿಸಿದ್ದಾರೆ.
ಗಣ್ಯರ ಉಪಸ್ಥಿತಿ: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಡೀನ್ ಡಾ. ರಾಮಚಂದ್ರ ನಾಯಕ, ಖ್ಯಾತ ರಂಗ ತಜ್ಞ ಹುಲಗಪ್ಪ ಕಟ್ಟಿಮನಿ, ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಂಗದ ಸಹ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಅಧ್ಯಕ್ಷತೆ ವಹಿಸಲಿದ್ದು, ವಿಜಯೀಂದ್ರ ಅರ್ಚಕ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ವೈಭವ: ಇದೇ ಸಂದರ್ಭದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಮಾರುತಿ, ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಗೋಪಾಲ ಉಣಕಲ್ ಹಾಗೂ ಭೀಮನಗೌಡ ಕಟಾವಿ ಮತ್ತು ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ಡಾ. ಪ್ರಕಾಶ ಮಲ್ಲಿಗವಾಡ ಅವರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಉಪಾಧ್ಯೆ ನೃತ್ಯ ವಿಹಾರದ ವಿದ್ಯಾರ್ಥಿಗಳಿಂದ ಭರತನಾಟ್ಯ, ಕುಶಾಲ ಗಲಗಲಿ ಅವರಿಂದ ಸುಗಮ ಸಂಗೀತ ಹಾಗೂ ಹಿರಿಯ ಕಲಾವಿದ ಸಿ.ಎಸ್. ಪಾಟೀಲ ಕುಲಕರ್ಣಿ ಅವರಿಂದ ‘ಕುರುಕ್ಷೇತ್ರ’ ನಾಟಕದ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ. 1985ರಿಂದ ರಂಗಭೂಮಿ ಸೇವೆಯಲ್ಲಿ ತೊಡಗಿರುವ ಸ್ನೇಹಿತರು ಕಲಾ ಸಂಘವು, 2008ರಿಂದ ನಿರಂತರವಾಗಿ ಹಿರಿಯ ರಂಗಕರ್ಮಿಗಳನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಈ ಸಾಂಸ್ಕೃತಿಕ ಹಬ್ಬಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘವು ಪ್ರಕಟಣೆಯಲ್ಲಿ ಕೋರಿದೆ.

