
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಮಹಿಳೆಯೊಬ್ಬರು ಅತ್ಯಂತ ಗಂಭೀರ ಸ್ವರೂಪದ ಲೈಂಗಿಕ ಕಿರುಕುಳ ಹಾಗೂ ಬೆದರಿಕೆಯ ಆರೋಪ ಮಾಡಿದ್ದು, ಈ ಪ್ರಕರಣ ಇದೀಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಇನ್ಸ್‌ಪೆಕ್ಟರ್ ಕಿರುಕುಳ ತಾಳಲಾರದೆ ತಾಕೋಡೆ ಗ್ರಾಮದ ನೊಂದ ಮಹಿಳೆಯು ಇದೀಗ ನ್ಯಾಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಎಂಟು ಪುಟಗಳ ಸುದೀರ್ಘ ದೂರು ಸಲ್ಲಿಸಿದ್ದಾರೆ.
ತನ್ನ ಪತಿಯನ್ನು ವಿನಾಕಾರಣ ಬಂಧಿಸಿರುವ ಇನ್ಸ್‌ಪೆಕ್ಟರ್ ಸಂದೇಶ್, ಆತನನ್ನು ಬಿಡುಗಡೆ ಮಾಡಲು ಹಾಗೂ ಪ್ರಕರಣದಿಂದ ರಕ್ಷಿಸಲು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ನನ್ನ ಮಾತು ಕೇಳದಿದ್ದರೆ ಹಲ್ಲೆ ಮಾಡುವುದಾಗಿ, ಹಣ ನೀಡದಿದ್ದರೆ ರೌಡಿಶೀಟ್ ತೆರೆಯುವುದಾಗಿ ಬೆದರಿಕೆ ಹಾಕುತ್ತಿದ್ದರು. ಅಲ್ಲದೆ ಗೃಹ ಸಚಿವರ ಹೆಸರನ್ನು ಹೇಳಿ ಹೆದರಿಸುತ್ತಿದ್ದರು” ಎಂದು ಮಹಿಳೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಇನ್ಸ್‌ಪೆಕ್ಟರ್ ರಾತ್ರಿ ವೇಳೆ ಮನೆಯ ಗೇಟ್ ಹಾರಿಕೊಂಡು ಒಳಬಂದು ಮಹಿಳೆಯರ ಕೈ ಹಿಡಿದು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮೂಡಬಿದಿರೆ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಹಿಳೆಯರು ಇದೇ ರೀತಿ ಇನ್ಸ್‌ಪೆಕ್ಟರ್‌ನಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದು, ಮಾನಹಾನಿ ಹಾಗೂ ಪ್ರಾಣಭಯದಿಂದ ಮೌನವಾಗಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಈ ಕುರಿತು ಈ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಎಸಿಪಿ ಶ್ರೀಕಾಂತ್ ಎಂಬುವವರ ಹೆಸರನ್ನೂ ದೂರಿನಲ್ಲಿ ಪ್ರಸ್ತಾಪಿಸಲಾಗಿದ್ದು, ಇಲಾಖೆಯಲ್ಲಿ ಇಂತಹ ವರ್ತನೆಗಳು ಸಾಮಾನ್ಯ ಎಂಬರ್ಥದ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವು ಇದೀಗ ಸರ್ಕಾರದ ಮಟ್ಟಕ್ಕೆ ತಲುಪಿದ್ದು, ನೊಂದ ಮಹಿಳೆಯರಿಗೆ ನ್ಯಾಯ ಸಿಗುತ್ತದೆಯೇ ಮತ್ತು ಆರೋಪಿ ಇನ್ಸ್‌ಪೆಕ್ಟರ್ ವಿರುದ್ಧ ಶಿಸ್ತು ಕ್ರಮ ಜರುಗುತ್ತದೆಯೇ ಎಂಬ ಕುತೂಹಲ ಮೂಡಿಸಿದೆ.

