ಜಿಲ್ಲಾಮಟ್ಟದ 12ನೇ ಜನತಾ ದರ್ಶನ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್

Spread the love

ಧಾರವಾಡ: ನಮಗೆಲ್ಲರಿಗೂ ಇರುವ ಸಂಬಳ ಹಾಗೂ ಸವಲತ್ತುಗಳು ಸಾರ್ವಜನಿಕರ ತೆರಿಗೆಯಿಂದ ಬಂದಿದ್ದು, ಪ್ರತಿಯೊಬ್ಬ ಅಧಿಕಾರಿಯು ತಮ್ಮ ಕೆಲಸವನ್ನು ಮಾನವೀಯತೆ ಮತ್ತು ಆತ್ಮಸಾಕ್ಷಿಯಿಂದ ನಿರ್ವಹಿಸಬೇಕು. ಕರ್ತವ್ಯದಲ್ಲಿ ವಿನಾಕಾರಣ ವಿಳಂಬ, ಆಲಸ್ಯ ಅಥವಾ ಬೇಜವಾಬ್ದಾರಿತನ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೂಡಲೇ ಮನೆಗೆ ಹೋಗಬಹುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಠಿಣ ಎಚ್ಚರಿಕೆ ನೀಡಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಧಾರವಾಡ ಜಿಲ್ಲಾಡಳಿತವು ಆಯೋಜಿಸಿದ್ದ ಜಿಲ್ಲಾ ಮಟ್ಟದ 12ನೇ ಜನತಾ ದರ್ಶನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

​ಜನತಾ ದರ್ಶನಕ್ಕೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳನ್ನು ಗಮನಿಸಿದರೆ, ಆಯಾ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದೆ ಕೇವಲ ಕಾಟಾಚಾರಕ್ಕೆ ಉತ್ತರಿಸುತ್ತಿರುವುದು ಕಂಡುಬರುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಹಾಗೂ ಅರ್ಜಿಗಳನ್ನು ಬೇರೆ ಹಂತಕ್ಕೆ ರವಾನಿಸುವಾಗ ಅರ್ಜಿದಾರರಿಗೆ ಪೂರಕ ಮಾಹಿತಿ ನೀಡಬೇಕು. ಅಧಿಕಾರಿಗಳು ಯಾಂತ್ರಿಕವಾಗಿ ವರ್ತಿಸುವುದನ್ನು ಬಿಟ್ಟು ಸಾರ್ವಜನಿಕ ಕಳಕಳಿ ಬೆಳೆಸಿಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಜನರು ಜಿಲ್ಲಾ ಕಚೇರಿಗಳಿಗೆ ಬರುವಂತಾಗಬಾರದು, ಬದಲಿಗೆ ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಸಮಸ್ಯೆಗಳನ್ನು ಸಂಯಮದಿಂದ ಆಲಿಸಿ ಇತ್ಯರ್ಥಪಡಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

​ಇಂದಿನ ಜನತಾ ದರ್ಶನದಲ್ಲಿ ವಿವಿಧ ಗ್ರಾಮ ಹಾಗೂ ನಗರ ಪ್ರದೇಶಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ವೈಯಕ್ತಿಕ ಮತ್ತು ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ 87ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರು. ಸಚಿವರು ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣದ ಇತ್ಯರ್ಥಕ್ಕೆ ಸೂಚಿಸಿದರು. ಒಟ್ಟು ಸಲ್ಲಿಕೆಯಾದ 87 ಅರ್ಜಿಗಳಲ್ಲಿ ಕಂದಾಯ ಇಲಾಖೆಯ 21, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 20, ನಗರಾಭಿವೃದ್ಧಿ ಇಲಾಖೆಯ 19, ವಸತಿ ಇಲಾಖೆಯ 7, ಸಾರಿಗೆ ಇಲಾಖೆಯ 4, ಗೃಹ ಮತ್ತು ಇಂಧನ ಇಲಾಖೆಯ ತಲಾ 3, ಕೃಷಿ, ಶಿಕ್ಷಣ ಹಾಗೂ ಆಹಾರ ಇಲಾಖೆಯ ತಲಾ 2 ಅರ್ಜಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಹವಾಲುಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದರು.

​ವೇದಿಕೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ, ಐಎಎಸ್ ಪ್ರೊಬೇಷನರಿ ಅಧಿಕಾರಿ ರೀತಿಕಾ ವರ್ಮಾ ಹಾಗೂ ಉಪವಿಭಾಗಾಧಿಕಾರಿ ಶಾಲಂ ಹಿಸೇನ್ ಉಪಸ್ಥಿತರಿದ್ದು ಅಹವಾಲುಗಳ ಇತ್ಯರ್ಥಕ್ಕೆ ಸಹಕರಿಸಿದರು. ಶಿರಸ್ತೆದಾರ ಮಲ್ಲಿಕಾರ್ಜುನ ಸೊಲಗಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು, ಶ್ರೀಧರ ಕೆ. ವಂದಿಸಿದರು ಹಾಗೂ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡರ ಅಹವಾಲುಗಳನ್ನು ಕ್ರೋಡೀಕರಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ನೂರಾರು ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *