
ಗದಗ: ಗುತ್ತಿಗೆದಾರರೊಬ್ಬರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಆಪ್ತ ಸಹಾಯಕರನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶಾಸಕರ ಒಡೆತನದ ಆಸ್ಪತ್ರೆಯಲ್ಲೇ ಈ ಲಂಚದ ವಹಿವಾಟು ನಡೆಯುತ್ತಿದ್ದಾಗ ದಾಳಿ ನಡೆಸಿರುವ ಪೊಲೀಸರು, ಐದು ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ನೀಡಲು ಶಾಸಕರು ಗುತ್ತಿಗೆದಾರ ವಿಜಯ ಪೂಜಾರ ಎಂಬುವವರಿಂದ ಒಟ್ಟು 11 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಪೈಕಿ ಮೊದಲ ಕಂತಾಗಿ ಐದು ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಶಾಸಕರು ಸೂಚಿಸಿದ್ದರು. ಈ ಕುರಿತು ಗುತ್ತಿಗೆದಾರರು ನೀಡಿದ ದೂರಿನ ಮೇರೆಗೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡವು ದಾಳಿಗೆ ಸಂಚು ರೂಪಿಸಿತ್ತು.
ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಶಾಸಕರಿಗೆ ಸೇರಿದ ಬಾಲಾಜಿ ಆಸ್ಪತ್ರೆಯಲ್ಲೇ ಹಣ ನೀಡಲು ಸಮಯ ನಿಗದಿಪಡಿಸಲಾಗಿತ್ತು. ಗುತ್ತಿಗೆದಾರರು ಶಾಸಕರ ಸಮ್ಮುಖದಲ್ಲೇ ಅವರ ಆಪ್ತ ಸಹಾಯಕ ಮಂಜುನಾಥ್ (ಮಂಜು ವಾಲ್ಮೀಕಿ) ಅವರಿಗೆ ಐದು ಲಕ್ಷ ರೂಪಾಯಿ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದರು. ಪೊಲೀಸರನ್ನು ಕಂಡ ತಕ್ಷಣ ಗಾಬರಿಗೊಂಡ ಆಪ್ತ ಸಹಾಯಕ ಮಂಜುನಾಥ್, ಹಣದ ಕಂತೆಯನ್ನು ಆಸ್ಪತ್ರೆಯ ಹಿಂಭಾಗದ ಕಸದ ರಾಶಿಗೆ ಎಸೆದು ಪರಾರಿಯಾಗಲು ಯತ್ನಿಸಿದನು. ಆದರೆ ತಕ್ಷಣ ಎಚ್ಚೆತ್ತ ಲೋಕಾಯುಕ್ತ ಸಿಬ್ಬಂದಿ ಆತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಮತ್ತೊಬ್ಬ ಪಿಎ ಗುರು ಲಮಾಣಿ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ. ರಸ್ತೆ ಬದಿಯ ತಡೆಗೋಡೆ ಕಾಮಗಾರಿಯ ಹಂಚಿಕೆಯಲ್ಲಿ ನಡೆದ ಈ ದೊಡ್ಡ ಮಟ್ಟದ ಕಮಿಷನ್ ದಂಧೆಯು ಜಿಲ್ಲಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಸದ್ಯ ಲೋಕಾಯುಕ್ತ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

