
ಧಾರವಾಡ: ಅಳ್ನಾವರ ತಾಲೂಕಿನ ಮೂಲಭೂತ ಸೌಕರ್ಯಗಳ ಉನ್ನತಿಕರಣಕ್ಕೆ ಆದ್ಯತೆ ನೀಡಿ ತಾಲೂಕಿನ ಸಮಗ್ರಭಿವೃದ್ಧಿಗೆ ನಿಲನಕ್ಷೆ ರೂಪಿಸಲಾಗುವುದು ಮತ್ತು ಅಳ್ನಾವರ ಪಟ್ಟಣದ ಹಿರೇಕೆರೆಯ ಒತ್ತುವರಿಯನ್ನು ತೆರವುಗೊಳ್ಳಿಸಿ, ಕೆರೆಯಲ್ಲಿನ ಅಂತರಗಂಗೆ ಸೇರಿದಂತೆ ಮುಳ್ಳು ಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ನಿರ್ದೇಶಿಸಿದರು.
ಅವರು (ಫೆ.17) ಮಧ್ಯಾಹ್ನ ಅಳ್ಳಾವರ ಪಟ್ಟಣದ ಉಮಾಮಹೆಶ್ವರ ಭವನದಲ್ಲಿ ತಾಲೂಕಾ ಆಡಳಿತದಿಂದ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ, ಜನರ ಸಮಸ್ಯೆಗಳನ್ನು ಆಲಿಸಿ, ಮಾತನಾಡಿದರು.
ಹಿರೇಕೆರೆಯ ಪ್ರದೇಶವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿ, ನೀರು ಸಂಗ್ರಹ ಸಾಮಥ್ರ್ಯ ಹೆಚ್ಚಿಸುವ ಜೊತೆಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಬೇಕು. ಕೆರೆಯನ್ನು ಸಮರ್ಪಕವಾಗಿ ಸಿದ್ಧಪಡಿಸುವ ಯೋಜನೆ ರೂಪಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸುವದಾಗಿ ಅವರು ಹೇಳಿದರು.

ಜಿಲ್ಲೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಪರಿಹಾರ ಒದಗಿಸುವಲ್ಲಿ ಜಿಲ್ಲಾಡಳಿತ ಕ್ರಮ ವಹಿಸುತ್ತದೆ ಹಾಗೂ ಸಾರ್ವಜನಿಕರ ಅಹವಾಲುಗಳು ಕೇವಲ ಅರ್ಜಿ ರೂಪದಲ್ಲಿ ಉಳಿಯದೆ, ಅವುಗಳನ್ನೂ ನಿಗದಿತ ಅವಧಿಯಲ್ಲಿ ಸ್ಪಷ್ಟ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇರುವುದರಿಂದ ಚಿಕಿತ್ಸೆ ಸೇವೆಗೆ ಅಡಚಣೆ ಉಂಟಾಗದಂತೆ ಶೀಘ್ರದಲ್ಲೇ ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ತಾಲೂಕಿನಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳನ್ನು ವೇಗಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ, ಕಟ್ಟಡ, ಕುಡಿಯುವ ನೀರು ಹಾಗೂ ಇತರ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಇಲಾಖೆವಾರು ವಿಂಗಡಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗುತ್ತದೆ. ಪ್ರತಿಯೊಂದು ಮನವಿಗೂ ನಿಗದಿತ ಅವಧಿಯಲ್ಲಿ ಉತ್ತರ ಮತ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ಅಧಿಕಾರಿಗಳು ಕಚೇರಿಯಲ್ಲಿ ಮಾತ್ರವಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಬೇಕು, ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೆಚ್ಚಿಸಲು ತಿಂಗಳಿಗೆ ಕನಿಷ್ಠ ಒಂದು ಬಾರಿ ಆದರು ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಸಭೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಅಳ್ಳಾವರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ನಾಗರಿಕರು ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೌಲಭ್ಯ, ಭೂ ದಾಖಲೆ, ಮನೆ ಹಂಚಿಕೆ, ವಿದ್ಯುತ್ ಸಮಸ್ಯೆ ಸೇರಿದಂತೆ ಅನೇಕ ವಿಷಯಗಳ ಕುರಿತು ಮನವಿ ಸಲ್ಲಿಸಿದರು.
ಸಾರ್ವಜನಿಕ ಸಭೆಯ ಪೂರ್ವದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಅಳ್ನಾವರ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದರು. ಹಾಗೂ ವಿಷಯ ನಿರ್ವಾಹಕರು, ಕಂದಾಯ ನಿರೀಕ್ಷಕರು, ಶಿರಸ್ತೆದಾರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಂದ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅಳ್ನಾವರ ತಾಲೂಕಿನ ಪ್ರಭಾರ ತಹಶೀಲ್ದಾರ್ ಡಾ. ಡಿ.ಎಚ್.ಹೂಗಾರ, ಗ್ರೇಡ್-2 ತಹಶೀಲ್ದಾರ ಹನಮಂತ ಕೊಚ್ಚರಗಿ, ಶಿರಸ್ತೆದಾರ ಮಂಗಳಗಟ್ಟಿ, ಕಂದಾಯ ನಿರೀಕ್ಷಕ ಸಂಪತಕುಮಾರ ವಡೆಯರ, ಗುರು ಸುಣಗಾರ, ತಾಲೂಕಾ ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ, ಆರ್‍ಎಫ್‍ಓ ಶಕುಂತಲಾ, ತಾಲೂಕ ಪಂಚಾಯತ ಸಹಾಯಕ ನಿರ್ದೇಶಕ ಸಂತೋಷ ತಳಕಲ್ಲ, ಅಳ್ನಾವರ ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ಪ್ರಕಾಶ ಮಗದುಮ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಅಳ್ಳಾವರ ತಾಲೂಕಿನ ಹಿರೇಕೆರೆಗೆ ಭೇಟಿ
ಸಾರ್ವಜನಿಕ ಸಭೆಯ ನಂತರ ಹಿರೇಕೆರೆಗೆ ಭೇಟಿ ನೀಡದ ಜಿಲ್ಲಾಧಿಕಾರಿ ಅವರು ಮಾತನಾಡಿ, ಕೆರೆಯ ಸುತ್ತಮುತ್ತಲಿನ ಒತ್ತುವರಿ ತೆರವು ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ತಹಶೀಲ್ದಾರ ಅವರಿಗೆ ಸೂಚಿಸಿದರು. ಕೆರೆಯ ವ್ಯಾಪ್ತಿ, ಗಡಿ ಹಾಗೂ ಭೂ ದಾಖಲೆಗಳ ಬಗ್ಗೆ ಮರು ಸಮೀಕ್ಷೆ ನಡೆಸಿ ನಿಖರ ವರದಿ ಸಲ್ಲಿಸುವಂತೆ ತಿಳಿಸಿದರು.
ಕೆರೆ ಪ್ರದೇಶವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿ, ನೀರು ಸಂಗ್ರಹ ಸಾಮಥ್ರ್ಯ ಹೆಚ್ಚಿಸುವ ಜೊತೆಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಬೇಕು ಎಂದರು. ಗ್ರಾಮಸ್ಥರಿಗೆ ಮತ್ತು ಕೃಷಿಗೆ ಸಹಾಯಕವಾಗುವಂತೆ ಕೆರೆಯನ್ನು ಸಮರ್ಪಕವಾಗಿ ಸಿದ್ಧಪಡಿಸುವ ಯೋಜನೆ ರೂಪಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

